ಗದಗ ಜಿಲ್ಲಾ ಕಸಾಪದಿಂದ ಪ್ರೊ. ಸಿ.ವಿ. ಕೆರಿಮನಿ ತಿರುಳುಗನ್ನಡ ಸಿರಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಸಾಹಿತ್ಯವು ಮನುಷ್ಯನ ವ್ಯಕ್ತಿತ್ವವನ್ನು ಉನ್ನತೀಕರಿಸಿ ಸಮಾಜದ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸುವಂತೆ ಮಾಡುತ್ತದೆ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಪ್ರೊ. ಸಿ.ವಿ. ಕೆರಿಮನಿ ಸ್ಮರಣಾರ್ಥ ತಿರುಳುಗನ್ನಡ ಸಿರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಾಹಿತಿಯು ತನ್ನ ಆಲೋಚನೆ ಮತ್ತು ಬರವಣಿಗೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ನಿರಂತರ ಶ್ರಮಿಸುತ್ತಾನೆ. ಕೃತಿಗಳ ಮೂಲಕವೇ ಸಮಾಜದಲ್ಲಿ ಅಜರಾಮರನಾಗುತ್ತಾನೆ. ಅಂತಹ ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೂ ಅತ್ಯಗತ್ಯ. ಪ್ರಾಧ್ಯಾಪಕರಾಗಿದ್ದ ಸಿ.ವಿ. ಕೆರಿಮನಿ ಅವರು ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವ ಮೂಲಕ ಪುಲಿಗೆರೆ ನಾಡಿಗೆ ಅರ್ಥಪೂರ್ಣ ಕೊಡುಗೆ ನೀಡಿದ್ದಾರೆ ಎಂದರು.ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೆ.ಎಚ್. ಬೇಲೂರ, ಇಂದಿನ ಯುವಪೀಳಿಗೆ ಓದಿನಿಂದ ವಿಮುಖವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದ್ದು, ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕೆರಿಮನಿ ಸಾಹಿತ್ಯ ಪರಿಷತ್ತನ್ನು ಕ್ರಿಯಾಶೀಲವಾಗಿ ಮುನ್ನಡೆಸಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಿದ್ದರು. ಅವರ ಕನ್ನಡ ಸೇವೆಯನ್ನು ಕುಟುಂಬ ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ದತ್ತಿದಾನಿ ಲಲಿತಮ್ಮ ಕೆರಿಮನಿ ಉಪಸ್ಥಿತರಿದ್ದರು. ಶಂಕರ ಕುಕನೂರ ಕವಿತೆ ವಾಚಿಸಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಸೋಮಶೇಖರ ಕೆರಿಮನಿ ವಂದಿಸಿದರು. ಸಂಪದಾ ಕೆರಿಮನಿ, ಲಕ್ಷ್ಮೀ ಕೆರಿಮನಿ, ಚಂದ್ರಶೇಖರ ವಸ್ತ್ರದ, ಶಿವಪ್ಪ ಕುರಿ, ಮಂಗಳಾ ಪಾಟೀಲ, ಸಿ.ಎಸ್. ಸಾಲುಟಗಿಮಠ ಸೇರಿದಂತೆ ಅನೇಕರಿದ್ದರು.