ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶಿಕ್ಷಣ ಇಲಾಖೆ ಎಲ್ಲಾ ಹಂತದಲ್ಲೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ದೃಢಹೆಜ್ಜೆ ಇಟ್ಟಿದೆ. ಶಿಕ್ಷಣ ಇಲಾಖೆಯ ಹಲವಾರು ಯೋಜನೆಗಳು ಸಾಕ್ಷರತಾ ಪ್ರಮಾಣ ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ. ಎಲ್ಲರಿಗೂ ಸಮಾನತೆಯ ಶಿಕ್ಷಣ ದೊರೆತಾಗ ಮಾತ್ರ ಶೈಕ್ಷಣಿಕ ಕ್ರಾಂತಿ ಸಾಧ್ಯವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ತಿಳಿಸಿದರು.ಶನಿವಾರ ತಾಲೂಕಿನ ದೊಡ್ಡೇರಿ ಕ್ಲಸ್ಟರ್ ವಿಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಗ್ಗಾವರದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶೇಷವಾಗಿ ಸರ್ಕಾರದ ಎಲ್ಲಾ ಶಾಲೆಗಳಲ್ಲೂ ಹಂತ, ಹಂತವಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಮುನ್ನಡೆಯತ್ತ ವಾಲುತ್ತಿದ್ದಾರೆ. ಗೈರು ಹಾಜರಾದ ವಿದ್ಯಾರ್ಥಿಗಳನ್ನೂ ಸಹ ಹುಡುಕಿತಂದು ಅವರಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್‌ಪಿ ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಅಂತಾರಾಷ್ಟ್ರೀಯ ಸಾಕ್ಷರತಾ ಕಾರ್ಯಕ್ರಮ ತಾಲೂಕಿನ ಎಲ್ಲಾ ಕ್ಲಸ್ಟರ್ ವಿಭಾಗದಲ್ಲೂ ಚಾಲನೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಆಸಕ್ತಿ ಮೂಡಿಸಲು ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ. ಸಾಕ್ಷರತ ಪ್ರಮಾಣ ಹೆಚ್ಚಾದಾಗ ಮಾತ್ರ ಶೈಕ್ಷಣಿಕ ಮುನ್ನಡೆಯಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಎಂ.ಜಿ.ಮಂಜುನಾಥ, ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿಲ್ಲ ಎಂಬ ಆರೋಪದಿಂದ ಶಿಕ್ಷಣ ಇಲಾಖೆ ಹೊರಬಂದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ಲಸ್ಟರ್ ವಿಭಾಗದ ಎಲ್ಲಾ ಶಾಲೆಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಇದು ಪ್ರೇರಕ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯೆ ಲಕ್ಷ್ಮಿದೇವಿ, ಲಕ್ಷ್ಮಕ್ಕ ರಂಗಸ್ವಾಮಿ, ಲೋಕೇಶ್, ಬೈರವಿ ಮಂಜುನಾಥ, ಶಾಂತಮ್ಮ ನಿಂಗಪ್ಪ, ರವಿಕುಮಾರ್, ಎ.ರಾಮಣ್ಣ, ಬಿಆರ್‌ಪಿ ಜಗದೀಶ್ ಎಸ್‌ಡಿಎಂಸಿ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಶೃತಿ ರಂಗಸ್ವಾಮಿ, ಸದಸ್ಯರಾದ ಮಂಜುಳಾ, ಜಯಮ್ಮ, ಸಿಆರ್‌ಪಿ ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಶಿಕ್ಷಕರಾದ ಗೀತಾ, ಪಾಲಾಕ್ಷಮ್ಮ, ಜಯಲಕ್ಷ್ಮೀ, ಗಂಗಮ್ಮ, ವಿ.ರಾಜಣ್ಣ, ತಿಪ್ಪೇಸ್ವಾಮಿ ಇದ್ದರು.