ಸಹಕಾರ ತತ್ವದಿಂದ ಸಮ ಸಮಾಜ

KannadaprabhaNewsNetwork |  
Published : Apr 03, 2024, 01:38 AM IST
2ಡಿಡಬ್ಲೂಡಿ7ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಎಸ್.ಎಸ್. ದೇಸಾಯಿ ದತ್ತಿಯಲ್ಲಿ ಕೆ.ಸಿ.ಸಿ. ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲ ಅವರಿಗೆ ‘ಅನುಪಮ ಸಹಕಾರಿ’  ಪ್ರಶಸ್ತಿ ಪ್ರದಾನ ಮಾಡಲಾಯಿತು. | Kannada Prabha

ಸಾರಾಂಶ

ನಾವು ನಿಮಗಾಗಿ ನೀವು ನಮಗಾಗಿ ಎಂಬುದು ಸಹಕಾರಿ ಸಂಘದ ಮುಖ್ಯತತ್ವ. ಇದು ಆದರ್ಶ ಸಮಾಜದ ಬುನಾದಿ. ಸಾರ್ವತ್ರಿಕ ಸೇವೆ ಹಾಗೂ ಸಮ ಸಮಾಜ ನಿರ್ಮಿಸುವಲ್ಲಿ ಅದರ ಪಾತ್ರ ಹಿರಿದಾಗಿದೆ.

ಧಾರವಾಡ:

ನಾವು ನಿಮಗಾಗಿ ನೀವು ನಮಗಾಗಿ ಎಂಬುದು ಸಹಕಾರಿ ಸಂಘದ ಮುಖ್ಯತತ್ವ. ಇದು ಆದರ್ಶ ಸಮಾಜದ ಬುನಾದಿ. ಸಾರ್ವತ್ರಿಕ ಸೇವೆ ಹಾಗೂ ಸಮ ಸಮಾಜ ನಿರ್ಮಿಸುವಲ್ಲಿ ಅದರ ಪಾತ್ರ ಹಿರಿದಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಎಸ್.ಎಸ್. ದೇಸಾಯಿ ದತ್ತಿಯಲ್ಲಿ ‘ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಸಹಕಾರ ಕ್ಷೇತ್ರದ ಮುಂದಿರುವ ಸವಾಲುಗಳು ಮತ್ತು ಪರಿಹಾರಗಳು’ ಕುರಿತು ಉಪನ್ಯಾಸ ನೀಡಿದ ಅವರು, ರೈತರನ್ನು ಮಧ್ಯವರ್ತಿಗಳ ಶೋಷಣೆಯಿಂದ ತಪ್ಪಿಸುವ ಉದ್ದೇಶವಾಗಿ ಸಹಕಾರ ಹುಟ್ಟಿಕೊಂಡಿತು. ಇದು ‘ವ್ಯಕ್ತಿಗಾಗಿ ಸಮಾಜ, ಸಮಾಜಕ್ಕಾಗಿ ವ್ಯಕ್ತಿ’ ಎಂಬ ತತ್ವದಡಿ ಉಳಿತಾಯ ಹಾಗೂ ಸ್ವ-ಸಹಾಯ ಎಂಬ ನೈತಿಕತೆ ಹಾಗೂ ಜೀವನ ವಿಧಾನದ ಗುರಿ ಹೊಂದಿದೆ ಎಂದರು.ಬ್ರಿಟಿಷರು ಭಾರತದ ಹಾಲು ಇಂಗ್ಲೆಂಡಿನ ಚರಂಡಿ ನೀರಿಗಿಂತ ಕಲುಷಿತ ಎಂಬ ಧೋರಣೆ ತಾಳಿದ ಸಂದರ್ಭದಲ್ಲಿ ಡಾ. ವರ್ಗೀಸ್ ಕುರಿಯನ್ ಸಹಕಾರಿ ತತ್ವದಡಿ ‘ಅಮೂಲ’ ಹಾಗೂ ‘ಆನಂದ’ ಸಂಘ ಸ್ಥಾಪಿಸಿ ಕ್ಷೀರಕ್ರಾಂತಿ ಮಾಡಿ ಬ್ರಿಟಿಷರ ಧೋರಣೆ ವಿರುದ್ಧ ಕ್ರಾಂತಿಕಾರಕ ಬದಲಾವಣೆ ತಂದರು. ಇಂದು ಸಹಕಾರಿ ತತ್ವದಡಿ ಪ್ರಾರಂಭವಾಗಿ “ಇಫ್ಕೋ” ರೈತರಿಗಾಗಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿ ದಾಖಲೆ ಮಾಡಿದೆ. ಭಾರತದಲ್ಲಿ ಸಹಕಾರಿ ತತ್ವದಡಿ ಗೋಕಾಕದಲ್ಲಿ ವಿದ್ಯುತ್ ಸರಬರಾಜು, ಯಲ್ಲಾಪುರದ ತೋಟಗಾರಿಕಾ ಸಹಕಾರಿ ಸಂಘದ ಸಾಧನೆಗಳು ವಿಶ್ವವೇ ಬೆರಗುಗೊಳಿಸುವಂತಿದೆ. ಪ್ರಸ್ತುತ ಸಂದರ್ಭದಲ್ಲಿ ಸಹಕಾರಿ ಸಾಧನೆ ಬಗ್ಗೆ ಚಿಂತನ-ಮಂಥನ ಅಗತ್ಯ. ಜಾಗತೀಕರಣದ ನೆಪದಲ್ಲಿ ಸಹಕಾರಿ ಕ್ಷೇತ್ರ ನಿರ್ಲಕ್ಷಿಸಿದರೆ ದುರ್ಭಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.

ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ ಮಾತನಾಡಿ, ಪ್ರೊ. ಎಸ್.ಎಸ್. ದೇಸಾಯಿ ಹಾಗೂ ಎಸ್.ಜಿ. ಪಾಟೀಲರು ಶ್ರೇಷ್ಠ ಸಹಕಾರಿಗಳು. ಇರ್ವರೂ ಆ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ನಿಸ್ವಾರ್ಥ ಭಾವನೆ, ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಆದರೆ ಇಂದು ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ವಿಶ್ವಾಸದ ಕೊರತೆ ಇರುವುದು ವಿಷಾದನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಮೆರಿಟಸ್ ಪ್ರಾಧ್ಯಾಪಕ ಡಾ. ಸಿ.ಆರ್. ಯರವಿನತೆಲಿಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ವಿಶ್ರಾಂತ ಪ್ರಧಾನ ವ್ಯವಸ್ಥಾಪಕ ಎಸ್.ಜಿ. ಪಾಟೀಲ ಅವರಿಗೆ ‘ಅನುಪಮ ಸಹಕಾರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಎಸ್. ಚಿಕ್ಕಮಠ, ಪ್ರೊ. ಎಸ್.ಎಸ್. ದೇಸಾಯಿ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ