ಮನೆಯ ಗೋಡೆ ಕುಸಿದು ಪೌರಕಾರ್ಮಿಕ ವೃದ್ಧೆ ಸಾವು

KannadaprabhaNewsNetwork | Published : Aug 14, 2024 12:56 AM

ಸಾರಾಂಶ

ಹನೂರಿನಲ್ಲಿ ತಡರಾತ್ರಿ ಸೋಮವಾರ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಪೌರಕಾರ್ಮಿಕ ಕುಟುಂಬದ ವೃದ್ಧೆಯೋರ್ವಳು ಮೃತಪಟ್ಟಿರುವ ಘಟನೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗಾನಲ್ಲೂರು ಗ್ರಾಮದಲ್ಲಿ ಜರುಗಿದೆ.

ಕನ್ನಡಪ್ರಭ ವಾರ್ತೆ ಹನೂರು

ತಡರಾತ್ರಿ ಸೋಮವಾರ ಸುರಿದ ಮಳೆಗೆ ಮನೆಯ ಗೋಡೆ ಕುಸಿದು ಪೌರಕಾರ್ಮಿಕ ಕುಟುಂಬದ ವೃದ್ಧೆಯೋರ್ವಳು ಮೃತಪಟ್ಟಿರುವ ಘಟನೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗಾನಲ್ಲೂರು ಗ್ರಾಮದಲ್ಲಿ ಜರುಗಿದೆ. ಸಿಂಗಾನಲ್ಲೂರು ಗ್ರಾಮದ ರಂಗಮ್ಮ ಮೃತಪಟ್ಟ ಮಹಿಳೆಯಾಗಿದ್ದಾರೆ.

ಘಟನೆ ವಿವರ: ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗಾನಲ್ಲೂರು ಗ್ರಾಮದ ಮೃತ ರಂಗಮ್ಮ ಹಾಗೂ ಪುತ್ರಿ ಲಕ್ಷ್ಮಮ್ಮ ಪುತ್ರ ರಂಗಯ್ಯ ಮೂರು ಜನರು ಮನೆಯಲ್ಲಿ ಮಲಗಿದ್ದರು. ಸೋಮವಾರ ತಡ ರಾತ್ರಿ ಒಂದು ಗಂಟೆಯ ವೇಳೆ ಬಿದ್ದ ಮಳೆಗೆ ಏಕಾಏಕಿ ಗೋಡೆ ಕುಸಿದ ಪರಿಣಾಮ ರಂಗಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಗೋಡೆ ಬೀಳುವ ಶಬ್ದಕ್ಕೆ ಎಚ್ಚರವಾದ ಪುತ್ರ, ಪುತ್ರಿ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಮನೆಯ ಯಜಮಾನಿ ರಂಗಮ್ಮ ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ನೆರೆದಿದ್ದವರ ಮನಕಲಕುವಂತಿತ್ತು.

ಆರ್.ನರೇಂದ್ರ ಸಾಂತ್ವನ: ಮಳೆಗೆ ಮನೆಯ ಗೋಡೆ ಕುಸಿದಿದ್ದು ಪೌರ ಕಾರ್ಮಿಕ ಕುಟುಂಬದ ರಂಗಮ್ಮ ಮೃತ ಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಶಾಸಕ ನರೇಂದ್ರ ಅವರು ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ದೂರವಾಣಿ ಮೂಲಕ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಜೊತೆ ಮಾತನಾಡಿ, ಮೃತ ಪಟ್ಟಿರುವ ರಂಗಮ್ಮ ಪೌರಕಾರ್ಮಿಕರಾಗಿದ್ದು ಕಡುಬುಡವರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮಂಜುಳಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article