ಪಾಂಡವಪುರ ಕ್ಷೇತ್ರದಲ್ಲಿ ಜಲಚಿಹ್ನೆ ನಿರ್ಮಿಸಿದ ಸಿ.ಎಸ್.ಪುಟ್ಟರಾಜು: ಪ್ರೊ.ಎಂ.ಕೃಷ್ಣೇಗೌಡ

KannadaprabhaNewsNetwork | Published : Aug 14, 2024 12:56 AM

ಸಾರಾಂಶ

ನಾನು ಯಾವುದೇ ದೇಶಕ್ಕೆ ಹೋದರು ಅಲ್ಲಿ ಪುಟ್ಟರಾಜು ಅವರಿಗೆ ಸ್ನೇಹಿತರಿದ್ದಾರೆ. ಅಮೆರಿಕಾದಲ್ಲಿ ಸಾಕಷ್ಟು ಭಾರತೀಯರು ರಾಜಕೀಯಕ್ಕೆ ಬಂದಿದ್ದಾರೆ. ಹಾಗಾಗಿ ಪುಟ್ಟರಾಜು ಅವರನ್ನು ಅಮೆರಿಕದಲ್ಲಿ ಚುನಾವಣೆಗೆ ನಿಲ್ಲಿಸಿಬಿಡೋಣ ಎಂದಿದ್ದೇನೆ. ಅವಾಗ ಸರಿಯೋಗತ್ತದೆ ಅಮೆರಿಕದಿಂದ ಬಂದವರನ್ನು ಇಲ್ಲಿ ಗೆಲ್ಲಿಸೋದು, ಇಲ್ಲಿಂದ ಹೋದವರನ್ನು ಅಮೆರಿಕಾದಲ್ಲಿ ಗೆಲ್ಲಿಸಿದಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಹೃದಯ ಶ್ರೀಮಂತಿಕೆಯುಳ್ಳ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಮಾಜದ ಒಳತಿಗಾಗಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಜಲಚಿಹ್ನೆ ನಿರ್ಮಿಸಿದ್ದಾರೆ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಬಣ್ಣಿಸಿದರು.

ತಾಲೂಕಿನ ಬೇಬಿಗ್ರಾಮದ ದುದಂಡೇಶ್ವರ ಮಠದಿಂದ ಮಂಗಳವಾರ ನಡೆದ ಲಿಂಗೈಕ್ಯ ಶ್ರೀಮರೀದೇವರುಸ್ವಾಮಿಗಳ 16ನೇ ವರ್ಷದ ಪುಣ್ಯಸ್ಮರಣೆ ಹಾಗೂ 4ನೇ ವರ್ಷದ ಮಹಾ ರಥೋತ್ಸವದಲ್ಲಿ ಮಹಾಚೇತನ ಶ್ರೀಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಸಿ.ಎಸ್.ಪುಟ್ಟರಾಜು ಅವರದು ನನ್ನದು ರಾಜಕೀಯ ಹೊರತಾದ ಹೃದಯ ಸಂಬಂಧ. ಅವರು ವೈಯುಕ್ತಿಕವಾಗಿ ನನಗೆ ಬಹಳ ಪ್ರಿಯವಾದ ವ್ಯಕ್ತಿ. ಒಬ್ಬ ಶಾಸಕ, ಮಂತ್ರಿ ಆಗೋಕೆ ಒಂದು ಪಕ್ಷ ಇದ್ದರೆ ಸಾಕು. ಅದೇ ಒಬ್ಬ ನಾಯಕನಾಗಿ ಬೆಳೆಯೋಕೆ ಆಂತರ್ಯ, ಗಟ್ಟಿತನ, ತಾಕತ್ತು, ಬದ್ಧತೆ ಬೇಕು ಎಂದರು.

ಸಿ.ಎಸ್.ಪುಟ್ಟರಾಜು ಅವರು ಗಟ್ಟಿತನ, ತಾಕತ್, ಬದ್ಧತೆಯಿಂದ ಲೀಡರ್ ಆಗಿ ಬೆಳೆದಿದ್ದಾರೆ. ಎಂಎಲ್‌ಎ, ಮಂತ್ರಿಗಳು ಮಾಜಿ ಆಗಬಹುದು ಒಬ್ಬ ನಾಯಕ ಎಂದಿಗೂ ಮಾಜಿ ನಾಯಕನಾಗೋಕೆ ಸಾಧ್ಯವಿಲ್ಲ. ಪುಟ್ಟರಾಜು ಅವರು ಮಾಜಿ ಮಂತ್ರಿ ಆಗಿರಬಹುದು ಆದರೆ, ಮಾಜಿ ನಾಯಕನಲ್ಲ ಎಂದು ಬಣ್ಣಿಸಿದರು.

ನಾನು ಯಾವುದೇ ದೇಶಕ್ಕೆ ಹೋದರು ಅಲ್ಲಿ ಪುಟ್ಟರಾಜು ಅವರಿಗೆ ಸ್ನೇಹಿತರಿದ್ದಾರೆ. ಅಮೆರಿಕಾದಲ್ಲಿ ಸಾಕಷ್ಟು ಭಾರತೀಯರು ರಾಜಕೀಯಕ್ಕೆ ಬಂದಿದ್ದಾರೆ. ಹಾಗಾಗಿ ಪುಟ್ಟರಾಜು ಅವರಿಗೆ ಒಂದು ಸಲಹೆ ಕೊಡೋಣ ಎಂದಿದ್ದೇನೆ. ಪುಟ್ಟರಾಜು ಅವರನ್ನು ಅಮೆರಿಕದಲ್ಲಿ ಚುನಾವಣೆಗೆ ನಿಲ್ಲಿಸಿಬಿಡೋಣ ಎಂದಿದ್ದೇನೆ. ಅವಾಗ ಸರಿಯೋಗತ್ತದೆ ಅಮೆರಿಕದಿಂದ ಬಂದವರನ್ನು ಇಲ್ಲಿ ಗೆಲ್ಲಿಸೋದು, ಇಲ್ಲಿಂದ ಹೋದವರನ್ನು ಅಮೆರಿಕಾದಲ್ಲಿ ಗೆಲ್ಲಿಸಿದಂತಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನನಗೆ ಬುದ್ಧಿಬಂದಾಗಿನಿಂದ ನಾನು ಕಂಡ ಬಹುದೊಡ್ಡ ನಾಯಕ ಪುಟ್ಟರಾಜು, ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಾಕಷ್ಟು ಕೆಲಸಮಾಡಿ ಕ್ಷೇತ್ರದಲ್ಲಿ ಜಲಚಿಹ್ನೆ ನಿರ್ಮಿಸಿದ್ದಾರೆ. ಒಂದು ತಿಂಗಳ ಕಾಲ ಕನ್ನಡ ಜಾತ್ರೆ, ಸುತ್ತೂರು ಶ್ರೀಗಳ ಜಾತ್ರೆ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ಪುಟ್ಟರಾಜು ಅವರಿಗೆ ಶ್ರೀಕ್ಷೇತ್ರದಿಂದ ನೀಡುತ್ತಿರುವ ಜೀವನದಿಪ್ರಶಸ್ತಿಗೆ ಘನತೆ ಹೆಚ್ಚಾಗಿದೆ ಎಂದರು.

ಮಠಗಳು ಮನುಷ್ಯರಿಗೆ ನೀತಿಮಾರ್ಗವನ್ನು ತೋರಿಸುತ್ತವೆ. ಹಣ, ಆಸ್ತಿ ಸಂಪಾದನೆ, ದೇಹ ವೃದ್ಧಿಸಿಕೊಳ್ಳುವುದನ್ನು ಹೇಳೋಕೆ ಸಾವಿರಾರು ಸಂಸ್ಥೆಗಳಿವೆ. ಮನುಷ್ಯನಿಗೆ ರೋಗ ಬಂದರೆ ವಾಸೆ ಮಾಡಲು ಆಸ್ಪತ್ರೆಗಳಿವೆ. ಮನಸ್ಸಿಗೆ ಬರುವ ರೋಗಗಳನ್ನು ಮಠಮಂದಿರಗಳಿಂದ ಮಾತ್ರ ಗುಣಪಡಿಸಲು ಸಾಧ್ಯ ಎಂದರು.

ಚಿತ್ರನಟಿ ತಾರಾ, ವಿರಕ್ತಮಠದ ಗೌರಿಶಂಕರ ಸ್ವಾಮೀಜಿ, ಪಾಂಡೋಮಟ್ಟಿ ಮಠದ ಡಾ.ಗುರುಬಸವ ಸ್ವಾಮೀಜಿ, ಗವಿಮಠದ ಮಲ್ಲಿಕಾರ್ಜುನ ಸ್ವಾಮಿ, ಕೆಆರ್ ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಮಾತನಾಡಿದರು.

ಇದೇ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ದಂಪತಿಗೆ ಮರಿದೇವರು ಶಿವಯೋಗಿ ಜೀವನದಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಎಂಎಸ್ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀಮರೀದೇವರು ಶ್ರೀಗಳ ರಥೋತ್ಸವ ನಡೆಯಿತು. ಭಕ್ತರು ರಥ ಎಳೆದು ಪುನೀತರಾದರು.

ಸಮಾರಂಭದಲ್ಲಿ ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರಮಹಂತ ಸ್ವಾಮೀಜಿ, ಮೈಶುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಆನಂದ, ತಾಲೂಕು ಅಧ್ಯಕ್ಷ ಶಿವಕುಮಾರ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಎಸ್.ಟಿ.ನಾಗಣ್ಣ, ಉಧ್ಯಮಿ ನಾಗೇಶ್, ಡೈರಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಸಿದ್ದರಾಜು, ಮಂಗಳಮ್ಮ, ಶಾಂತಮ್ಮ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Share this article