ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ತಾಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಸಂಪತ್ತಿಗೆ ದೊಡ್ಡ ಮಟ್ಟದ ಹಾನಿ ಉಂಟಾಗಿ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಈ ಅರಣ್ಯ ಪ್ರದೇಶದ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಸೇರಿದ ಮುತ್ತೋಡಿ ಅರಣ್ಯ ವಲಯದ ಎಮ್ರಹಳ್ಳಿ ಮತ್ತು ಹೊಸಖಾನ್ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಒಣಗಿದ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧ ದಲ್ಲೇ ಕಿಲೋ ಮೀಟರ್‌ಗಳಷ್ಟು ದೂರ ಬೆಂಕಿ ವ್ಯಾಪಿಸಿದೆ.

ಇದರಿಂದ ಅಪಾರ ಪ್ರಮಾಣದಲ್ಲಿ ಅಪರೂಪದ ಸಸ್ಯ ಸಂಪತ್ತಿಗೆ ಹಾನಿಯಾಗಿದೆ. ಅರಣ್ಯದ ಜೀವ ವೈವಿಧ್ಯತೆಗೆ ಹೊಡೆತ ಬಿದ್ದಿದೆ. ಬೆಂಕಿಯ ತೀವ್ರತೆಯಿಂದ ಅಭಯಾರಣ್ಯದಲ್ಲಿ ಇರುವ ಪ್ರಾಣಿ-ಪಕ್ಷಿಗಳ ಜೀವಕ್ಕೂ ಅಪಾಯ ಎದುರಾಗಿದೆ.

ಕಾಡಿನೊಳಗಿನ ಅನೇಕ ಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅರಣ್ಯದ ಬೇರೆ ಭಾಗಗಳಿಗೆ ಸ್ಥಳಾಂತರವಾಗುತ್ತಿರುವ ಸಾಧ್ಯತೆಯಿದೆ ಎಂದು ಅರಣ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಬೆಂಕಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಬೆಂಕಿ ವ್ಯಾಪಿಸಿರುವ ಪ್ರದೇಶಗಳಲ್ಲಿ ಸಿಬ್ಬಂದಿ ಅಗ್ನಿ ನಿಯಂತ್ರಣ ಕಾರ್ಯಾಚರಣೆ ನಡೆಸುತ್ತಿದ್ದು, ಮತ್ತಷ್ಟು ಬೆಂಕಿ ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅರಣ್ಯದಲ್ಲಿ ವಾಚರ್‌ಗಳ ಕೊರತೆ ಇಂದ ಬೆಂಕಿ ನಿಯಂತ್ರಿಸಲು ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.


ಜತೆಗೆ, ಕೆಲವೆಡೆ ಅಗತ್ಯವಿರುವ ಫೈರ್ ಲೈನ್‌ಗಳನ್ನು ಅಧಿಕಾರಿಗಳು ಮಾಡಿಲ್ಲ. ವಿಶೇಷವಾಗಿ ಜೇನುಕಲ್ಲುಗಿರಿ, ಕಾಗೆ ಮನೆಗಿರಿ ಹಾಗೂ ಗೆಸ್ಟ್ ಹೌಸ್ ರಸ್ತೆಯ ಭಾಗಗಳಲ್ಲಿ ಫೈರ್ ಲೈನ್ ಮಾಡದಿರುವುದು ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿದೆ. ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ತಕ್ಷಣವೇ ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿ ನಿಯಂತ್ರಣ ಸಾಧನ ಗಳನ್ನು ನಿಯೋಜಿಸಿ ಕಾಡ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಬೇಕು.

ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.