Sagara: Handloom is not merely a sector for cloth production; it is a symbol of the rural economy, agriculture, and craftsmanship. Prasanna Heggodu, founder of Charaka, opined that villages would not survive if this sector is not strengthened.
ಸಾಗರ: ಕೈಮಗ್ಗವು ಕೇವಲ ಬಟ್ಟೆ ಉತ್ಪಾದನೆಯ ಕ್ಷೇತ್ರವಲ್ಲ. ಗ್ರಾಮೀಣ ಆರ್ಥಿಕತೆ, ಕೃಷಿ ಮತ್ತು ಕುಶಲಕಲೆಯ ಸಂಕೇತವಾಗಿದೆ. ಈ ಕ್ಷೇತ್ರವನ್ನು ಬಲಪಡಿಸದಿದ್ದರೆ ಗ್ರಾಮಗಳು ಉಳಿಯುವುದಿಲ್ಲ ಎಂದು ಚರಕ ಸಂಸ್ಥಾಪಕ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟರು.ತಾಲೂಕಿನ ಹೊನ್ನೇಸರದ ಶ್ರಮಜೀವಿ ಆಶ್ರಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳ ಆರ್ಥಿಕ ಸ್ವಾವಲಂಬನೆಯ ದೃಷ್ಟಿಯಿಂದ ಗಾಂಧೀಜಿಯವರು ಕೈಮಗ್ಗವನ್ನು ಸ್ವಾತಂತ್ರ್ಯ ಚಳವಳಿಯ ಕೇಂದ್ರವನ್ನಾಗಿ ಮಾಡಿದ್ದರು ಎಂದು ನೆನಪಿಸಿದರು.ಸ್ವಾತಂತ್ರ್ಯ ನಂತರ ಸರ್ಕಾರಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಮಾಜ ಖಾದಿ ಹಾಗೂ ಗ್ರಾಮೋದ್ಯೋಗವನ್ನು ನಿರ್ಲಕ್ಷ್ಯ ಮಾಡಿದೆ. ಇದರಿಂದ ಕೈಮಗ್ಗ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಕೈಮಗ್ಗ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ವಿಷಾದಿಸಿದರು.ಅನೇಕ ಏರಿಳಿತಗಳ ನಡುವೆಯೂ ಕೈಮಗ್ಗ ಕ್ಷೇತ್ರ ಜೀವಂತವಾಗಿರುವುದು ಆಶಾದಾಯಕ ಬೆಳವಣಿಗೆ. ಈ ಕ್ಷೇತ್ರವು ಲಾಭದಾಯಕ ಉದ್ಯಮವಾಗಬಲ್ಲದು ಎಂಬುದನ್ನು ಕೆಲವು ಯಶಸ್ವಿ ಪ್ರಯತ್ನಗಳು ಸಾಬೀತುಪಡಿಸಿವೆ. ಈಗ ಈ ಯಶಸ್ಸು ದೇಶಾದ್ಯಂತ ವಿಸ್ತರಿಸುವ ಅಗತ್ಯವಿದೆ. ಗ್ರಾಮೀಣ ಉತ್ಪನ್ನಗಳ ಮೌಲ್ಯವನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಈಗ ಕೈಮಗ್ಗ ಕ್ಷೇತ್ರದ ಮೇಲಿದೆ. ಗ್ರಾಮೀಣ ಜನರು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ದೊಡ್ಡ ಉದ್ಯಮಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂದೇಶವನ್ನು ದೇಶಾದ್ಯಂತ ತಲುಪಿಸುವ ಹೊಸ ಚಳವಳಿಯನ್ನು ರೂಪಿಸಬೇಕು ಎಂದು ಹೇಳಿದರು.ಚರಕ ಸಂಸ್ಥೆ ಅಧ್ಯಕ್ಷ ಮಹಾಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ನಾಗರತ್ನ, ಕಾರ್ಯದರ್ಶಿ ರಮೇಶ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.೭ಕೆ.ಎಸ್.ಎ.ಜಿ.೨ಶ್ರಮಜೀವಿ ಆಶ್ರಯದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ನಡೆಯಿತು.