ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಚಾಲಕನ ನಿಯಂತ್ರಣ ತಪ್ಪಿ ಎಚ್ ಪಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ಸೋಲೂರು ಹೋಬಳಿಯ ಕೂಡ್ಲು ಕ್ರಾಸ್ ನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಂಗಳೂರಿನ ಗ್ಯಾಸ್ ಪ್ಲಾಂಟ್‍ನಿಂದ ಬೆಂಗಳೂರಿನತ್ತ ಬರುತ್ತಿದ್ದಾಗ ಸೋಲೂರು ಸಮೀಪ ಕೂಡ್ಲು ಕ್ರಾಸ್ ಬಳಿ ಅತೀ ವೇಗವಾಗಿ ಬಂದ ಟ್ಯಾಂಕರ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿದ್ದು, ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ತಪ್ಪಿದೆ.

ಮಂಗಳೂರಿನಿಂದ ಚೆನ್ನೈನ ಎಚ್‍ಪಿ ಗ್ಯಾಸ್ ಪ್ಲಾಂಟ್‍ಗೆ ಅನಿಲ ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಮುಂಜಾನೆ ಸುಮಾರು 6.30ರ ವೇಳೆಗೆ ಚಾಲಕನ ಹತೋಟಿ ತಪ್ಪಿ ಹೆದ್ದಾರಿಯಲ್ಲೇ ಉರುಳಿ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಅನಿಲ ಸೋರಿಕೆಯಾಗುವ ಭೀತಿಯಿಂದ ವಾಹನ ಸವಾರರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಕುದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಮುಂಜಾಗ್ರತಾ ಕ್ರಮವಾಗಿ ಅನಿಲ ಸೋರಿಕೆಯಾಗದಂತೆ ತಡೆಯಲು ಸಿಬ್ಬಂದಿ ಹರಸಾಹಸಪಟ್ಟರು. ಅದೃಷ್ಟವಶಾತ್ ಈ ಅಪಘಾತದಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇನ್ಸ್ಪೆಕ್ಟರ್ ಚಂದ್ರಶೇಖರ್, ಪಿಎಸ್‍ಐ ಭೀಮೇಶ್ ಹಾಗೂ ಸಿಬ್ಬಂದಿ ಈರಣ್ಣ, ಲವಕುಮಾರ್, ನವೀನ್, ಹರೀಶ್, ಮಾರುತಿ ಕುಮಾರ್ ಮತ್ತು ಹನುಮಂತರಾಜು ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.