ಕತ್ತಿಗೆ ಬಳಿ ಗಣಿಗಾರಿಕೆಗೆ ಅವಕಾಶ ನೀಡಲ್ಲ: ರೇಣುಕಾಚಾರ್ಯ

KannadaprabhaNewsNetwork |  
Published : Aug 14, 2024, 12:55 AM IST
ಹೊನ್ನಾಳಿ ಫೋಟೋ 13ಎಚ್.ಎಲ್.ಐ3. ತಾಲೂಕಿನ  ಕತ್ತಿಗೆ ಗ್ರಾಮದ  ಸಮೀಪದ ಜಮೀನಿನ ಮಧ್ಯೆ ಗಣಿಗಾರಿಕೆ ಮಾಡುವುದನ್ನು ವಿರೋಧಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕತ್ತಿಗೆ ಗ್ರಾಮಸ್ಥರು  ಗಣಿಗಾರಿಕೆ ಮಾಡುವ ಜಮೀನಿನ ವರಗೆ ಪಾದಯಾತ್ರೆ ನಡೆಸಿ ನಂತರ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. | Kannada Prabha

ಸಾರಾಂಶ

ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದ ಸಮೀಪ ಸುಮಾರು 10 ಎಕರೆ ಪ್ರದೇಶದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಿದ್ದಾರೆ. ರೈತರ ಹಿತಕ್ಕಾಗಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ. ಈ ಭಾಗದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಭರವಸೆ ನೀಡಿದ್ದಾರೆ.

- ನೂರಾರು ಗ್ರಾಮಸ್ಥರೊಂದಿಗೆ ಪಾದಯಾತ್ರೆ । ಗಣಿಗಾರಿಕೆ ನಡೆದರೆ ಬೋರ್‌ವೆಲ್‌, ಚೆಕ್‌ಡ್ಯಾಂಗಳಿಗೆ ನೀರಿಗೆ ಬರ: ಮಾಜಿ ಸಚಿವ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಕತ್ತಿಗೆ ಗ್ರಾಮದ ಸಮೀಪ ಸುಮಾರು 10 ಎಕರೆ ಪ್ರದೇಶದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಿದ್ದಾರೆ. ರೈತರ ಹಿತಕ್ಕಾಗಿ ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ. ಈ ಭಾಗದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭರವಸೆ ನೀಡಿದರು.

ಮಂಗಳವಾರ ತಾಲೂಕಿನ ಕತ್ತಿಗೆ ಗ್ರಾಮದಿಂದ ಗಣಿಗಾರಿಕೆ ಮಾಡಲು ಉದ್ದೇಶಿಸಿರುವ ಸ್ಥಳದವರೆಗೆ ಗ್ರಾಮದ ನೂರಾರು ಗ್ರಾಮಸ್ಥರ ಜೊತೆ ಪಾದಯಾತ್ರೆ ನಡೆಸಿ, ಅನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ಅಧಿಕಾರ ಅವಧಿಯಲ್ಲಿ ಇಲ್ಲಿ ಗಣಿಗಾರಿಕೆ ಮಾಡಲು ನಾನು ಬಿಟ್ಟಿರಲಿಲ್ಲ. ಈಗಲೂ ಕೂಡ ಕೊನೆ ಉಸಿರು ಇರುವವರೆಗೂ ಕಲ್ಲು ಗಣಿಗಾರಿಕೆ ಮಾಡಲು ಹಾಗೂ ರೈತರ ಬದುಕು ದುಸ್ತರವಾಗಲು ಬಿಡುವುದಿಲ್ಲ ಎಂದರು.

2018 ರಲ್ಲೂ ಇಲ್ಲಿ ಗಣಿಗಾರಿಕೆ ಮಾಡಲು ನನ್ನ ಬಳಿ ಗಣಿ ಮಾಲೀಕರು ಬಂದಿದ್ದರು. ಆದರೆ ಗ್ರಾಮಸ್ಥರ ಪರವಾಗಿ ನಿಂತು ಅಲ್ಲಿ ಗಣಿಗಾರಿಕೆ ಮಾಡಲು ಅವಕಾಶ ಕೊಡಬಾರದೆಂದು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಭರವಸೆ ಕೊಡಿಸಿದ್ದೆ. ಆದರೆ, ಈಗ ಮತ್ತೊಮ್ಮೆ ಇಲ್ಲಿ ಗಣಿಗಾರಿಕೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇದಕ್ಕೆ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದರು.

ಚೆಕ್‌ ಡ್ಯಾಂ, ಕೆರೆಗಳಿಗೆ ತೀವ್ರ ಹಾನಿ:

ಇಲ್ಲಿ ಗಣಿಗಾರಿಕೆ ಮಾಡಿದರೆ ಕತ್ತಿಗೆ ಗ್ರಾಮದ ಜೊತೆಗೆ ಅನೇಕ ಸುತ್ತಮುತ್ತನ ಗ್ರಾಮಗಳಲ್ಲಿ ಬೋರ್‌ವೆಲ್‍ಗಳಲ್ಲಿ ಅಂತರ್ಜಲ ಕುಸಿಯುತ್ತದೆ. ಅಡಕೆ ಹಾಗೂ ಮೆಕ್ಕೆಜೋಳ ಬೆಳೆಗಳಿಗೆ ತೀವ್ರ ಹಾನಿಯಾಗುತ್ತದೆ. ಬಿ.ಎಸ್‍.ಯಡಿಯೂರಪ್ಪ ಸಿಎಂ ಆಗಿದ್ದಾಗ ಅವಳಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ₹518 ಕೋಟಿ ಹಾಗೂ ಕೆರೆಗಳ ದುರಸ್ತಿಗೆ ₹70 ಕೋಟಿ ಹಣ ಬಿಡುಗಡೆ ಮಾಡಿಸಲಾಗಿತ್ತು. ಹೀಗಾಗಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ, ಇಲ್ಲಿ ಗಣಿಗಾರಿಕೆ ಮಾಡಿದರೆ ಚೆಕ್‍ ಡ್ಯಾಂ ಹಾಗೂ ಕೆರೆಗಳಿಗೆ ತೀವ್ರ ಹಾನಿಯಾಗುತ್ತದೆ ಎಂದು ವಿವರಿಸಿದರು.

ಗಣಿ ಸಚಿವರಿಗೆ ಮನವಿ ಮಾಡುತ್ತೇನೆ:

ಸರ್ವೆ ನಂ. 226ರಲ್ಲಿ ಗಣಿಗಾರಿಕೆ ಮಾಡಲು ಅವಕಾಶ ಕೊಡಬಾರದು ಎಂದು ಸಂಬಂಧಪಟ್ಟ ಗಣಿ ಭೂ ವಿಜ್ಞಾನ ಸಚಿವ ಹಾಗೂ ದಾವಣಗೆರೆ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಮಾಡುತ್ತೇನೆ. ಇದನ್ನೆ ಕೆಲವರು ಮಾಜಿ ಸಚಿವ ಎಂ.ಪಿ.ಆರ್. ಸಚಿವರನ್ನು ಭೇಟಿ ಮಾಡಿ, ಒಳಗೊಳಗೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಂದುಕೊಂಡರೂ ಪರವಾಗಿಲ್ಲ. ನನಗೆ ಗ್ರಾಮಸ್ಥರ ಹಿತವೇ ಮುಖ್ಯ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಗ್ರಾಮದ ಮುಖಂಡರಾದ ರಾಮಚಂದ್ರಣ್ಣ, ಮೇಘರಾಜ್, ಓಂಕಾರಪ್ಪ, ಯೋಗೇಶಪ್ಪ, ಲೋಕಪ್ಪ, ನಾಗರಾಜಪ್ಪ, ಬಿದ್ರಿ ಚನ್ನೇಶಪ್ಪ, ಬಸವರಾಜು, ರಾಜು, ಚನ್ನೇಶ್, ಆಶಿಕಾ ಕಾಂತರಾಜ್, ಪ್ರಸನ್ನ ಸೇರಿದಂತೆ ಕತ್ತಿಗೆ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

- - -

ಬಾಕ್ಸ್‌ * ಗಣಿಗಾರಿಕೆ ತಡೆಯೋಕೆ ರಕ್ತ ಕೊಡಲೂ ಸಿದ್ಧ: ಬಸವರಾಜ ಕತ್ತಿಗೆ ಗ್ರಾಮದ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜ್ ಮಾತನಾಡಿ, ಇಲ್ಲಿ ಗಣಿಗಾರಿಕೆ ಮಾಡಬೇಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ, ಮತ್ತೆ ಮತ್ತೆ ಇಲ್ಲೇ ಗಣಿಗಾರಿಕೆ ಮಾಡಲು ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ನಮ್ಮ ಗ್ರಾಮದ 2 ಸಾವಿರ ಜಾನುವಾರುಗಳಿಗೆ ತೊಂದರೆಯಾಗಲಿದೆ. ಗಣಿಗಾರಿಕೆ ಮಾಡಲು ಉದ್ದೇಶಿಸಿರುವ ಜಮೀನಿನ ಸುತ್ತಮುತ್ತ ಬೋರ್‌ವೆಲ್‌ಗಳ ಅಂತರ್ಜಲ ಕುಸಿಯುವುದು. ರೈತರ ಜೀವನಾಡಿ ಆಗಿರುವ ಹೊಸಕರೆಗೆ ಕೂಡ ತೀವ್ರ ಹಾನಿಯಾಗುವುದು ನಿಶ್ಚಿತ. ಆದ್ದರಿಂದ ಇಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಅಗತ್ಯ ಬಿದ್ದರೆ ಗಣಿಗಾರಿಕೆ ತಡೆಯಲು ಇಡೀ ಕತ್ತಿಗೆ ಗ್ರಾಮದ ಜನತೆ ರಕ್ತ ಕೊಡಲೂ ಸಿದ್ಧರಿದ್ದೇವೆ ಎಂದು ಭಾವುಕರಾಗಿ ನುಡಿದರು.

- - - -13ಎಚ್.ಎಲ್.ಐ3:

ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮ ಸಮೀಪದ ಜಮೀನಿನ ಮಧ್ಯೆ ಗಣಿಗಾರಿಕೆ ವಿರೋಧಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಕತ್ತಿಗೆ ಗ್ರಾಮಸ್ಥರು ಗಣಿಗಾರಿಕೆ ಮಾಡುವ ಜಮೀನಿನವರೆಗೆ ಪಾದಯಾತ್ರೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!