ಅನ್ನಭಾಗ್ಯ ಅಕ್ಕಿಗಾಗಿ 6 ತಿಂಗಳಿಂದ ಅಲೆದಾಡುತ್ತಿರುವ ವೃದ್ಧ ದಂಪತಿ!

KannadaprabhaNewsNetwork |  
Published : May 28, 2025, 12:55 AM IST
ಬಿಪಿಎಲ್‌ ಕಾರ್ಡ್‌ ತೋರಿಸುತ್ತಿರುವ ವೃದ್ಧ ದಂಪತಿ. | Kannada Prabha

ಸಾರಾಂಶ

ಹಳೆ ಬಾದಾಮಿ ನಗರದ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರ ನಿವಾಸದ ಸನಿಹದಲ್ಲೇ ವಾಸಿಸುತ್ತಿರುವ 80 ವರ್ಷದ ಮಡಿವಾಳಪ್ಪ ಮಡಿವಾಳರ ಹಾಗೂ ವಿಜಯಲಕ್ಷ್ಮಿ ಮಡಿವಾಳರ ಅಕ್ಕಿಗಾಗಿ ಪರದಾಡುತ್ತಿರುವ ವೃದ್ಧ ದಂಪತಿ.

ಮಹೇಶ ಅರಳಿ

ಹುಬ್ಬಳ್ಳಿ: ಬಿಪಿಎಲ್‌ ಕಾರ್ಡ್‌ ಇದ್ದರೂ ಕಳೆದ 6 ತಿಂಗಳಿನಿಂದ ಅನ್ನಭಾಗ್ಯದ ಅಕ್ಕಿ ಸಿಗದೇ ನಿತ್ಯ ಅನ್ನಕ್ಕಾಗಿ ಬಡ ವೃದ್ಧ ದಂಪತಿಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದರೂ ಸಂಬಂಧಪಟ್ಟವರು ಇವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ಹಳೆ ಬಾದಾಮಿ ನಗರದ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರ ನಿವಾಸದ ಸನಿಹದಲ್ಲೇ ವಾಸಿಸುತ್ತಿರುವ 80 ವರ್ಷದ ಮಡಿವಾಳಪ್ಪ ಮಡಿವಾಳರ ಹಾಗೂ ವಿಜಯಲಕ್ಷ್ಮಿ ಮಡಿವಾಳರ ಅಕ್ಕಿಗಾಗಿ ಪರದಾಡುತ್ತಿರುವ ವೃದ್ಧ ದಂಪತಿ.

ಬಟ್ಟೆ ಇಸ್ತ್ರಿ (ಐರನ್) ಮಾಡುವುದು ಇವರ ಕುಲಕಸುಬು. ಇತ್ತೀಚೆಗೆ ವಯಸ್ಸು ಎಂಬತ್ತರ ಗಡಿ ದಾಟಿದ್ದರಿಂದ ಇಸ್ತ್ರಿ ಪೆಟ್ಟಿಗೆ ಎತ್ತಲು ಆಗುತ್ತಿಲ್ಲ. ಸರ್ಕಾರ ನೀಡುವ ವೃದ್ಧಾಪ್ಯ ವೇತನ, ಗೃಹಲಕ್ಷ್ಮಿ ಹಣವೇ ಇವರ ಬದುಕಿಗೆ ಊರುಗೋಲು. ಆದರೆ, ಕಳೆದ ಆರು ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಇವರಿಗೆ ಸಿಕ್ಕಿಲ್ಲ. ಅದಕ್ಕಾಗಿ ಹಲವಾರು ಬಾರಿ ರೇಷನ್‌ ಅಂಗಡಿ, ಆಹಾರ ಇಲಾಖೆಗೆ ಎಡತಾಕಿದರೂ ಪ್ರಯೋಜನವಾಗಿಲ್ಲ.

ಇವರು ಮೊದಲು ಮೊಬೈಲ್ ಒಟಿಪಿ ವ್ಯವಸ್ಥೆಯಡಿ ಪಡಿತರ ಅಕ್ಕಿ ಪಡೆಯುತ್ತಿದ್ದರು. 6 ತಿಂಗಳ ಹಿಂದೆ ರಾಜ್ಯ ಸರ್ಕಾರ ಒಟಿಪಿ ವ್ಯವಸ್ಥೆಯನ್ನು ಬಂದ್ ಮಾಡಿತ್ತು. ಅಲ್ಲಿಂದ ಇವತ್ತಿನ ವರೆಗೂ ಅಕ್ಕಿ ಕೊಡಿ ಎಂದು ಹಲಬುತ್ತಾ ರೇಷನ್ ಪಡೆಯಲು ಅಂಗಡಿಗೆ, ಆಹಾರ ಇಲಾಖೆಯ ಕಚೇರಿ ಹತ್ತಾರು ಬಾರಿ ಎಡತಾಕಿದ್ದಾರೆ. ಅಂಗಡಿಯವರು ಹಾಗೂ ಅಧಿಕಾರಿಗಳು ಮುಂದಿನ ತಿಂಗಳು ರೇಷನ್ ಕೊಡುತ್ತೇವೆ ಎಂದು ಭರವಸೆ ನೀಡಿದರೆ ವಿನಃ ಅಕ್ಕಿ ಮಾತ್ರ ಕೊಡಲಿಲ್ಲ. ಅಕ್ಕಪಕ್ಕ ಮನೆಯವರು ಕೊಟ್ಟ ಅಕ್ಕಿಯಲ್ಲೇ ಬದುಕು ದೂಡುತ್ತಿದ್ದಾರೆ.

ಕರುಣಾಜನಕ ಕಥೆ: ವೃದ್ಧ ದಂಪತಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿ ಇದ್ದಾರೆ. ಒಬ್ಬ ಮಗ ಕೆಲ ವರ್ಷಗಳ ಹಿಂದೆ ಕುಡಿತದ ಚಟದಿಂದ ತೀರಿಕೊಂಡಿದ್ದಾನೆ. ಇನ್ನೊಬ್ಬ ಮಗ ಹೆಂಡತಿ ಜತೆ ಬೇರೆ ಕಡೆ ವಾಸಿಸುತ್ತಿದ್ದಾನೆ. ಮಗಳು ಮದುವೆಯಾಗಿ ಗಂಡನ ಮನೆಯಲ್ಲಿದ್ದಾಳೆ. ಹೀಗಾಗಿ ವೃದ್ಧ ದಂಪತಿ ಇಬ್ಬರೇ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.

ಇವರ ಬಾಡಿಗೆ ಮನೆಗೆ ಪ್ರತಿ ತಿಂಗಳು ₹2 ಸಾವಿರ ಕಟ್ಟಬೇಕು. ಮಡಿವಾಳಪ್ಪ ಅವರಿಗೆ ಬಿಪಿ ಇದೆ. ಪತ್ನಿ ವಿಜಯಲಕ್ಷ್ಮಿಗೆ ಹೃದ್ರೋಗ ಸಮಸ್ಯೆ ಇದೆ. ಹೀಗಾಗಿ ನಿಯಮಿತವಾಗಿ ಔಷಧಿ ಸೇವಿಸಬೇಕು. ಪರಿಸ್ಥಿತಿ ಹೀಗಿರುವಾಗ ಅನ್ನಭಾಗ್ಯದ ಅಕ್ಕಿ ಬಂದ್ ಮಾಡಿರುವುದು ಈ ವೃದ್ಧ ದಂಪತಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ವೃದ್ಧಾಪ್ಯ ವೇತನವೂ ಪ್ರತಿ ತಿಂಗಳು ಸರಿಯಾಗಿ ಬರುವುದಿಲ್ಲ. ಮನೆ ಬಾಡಿಗೆ ಕಟ್ಟಲು ಒಮ್ಮೊಮ್ಮೆ ಹಣ ಇಲ್ಲದಂತಾಗುತ್ತದೆ. ಹಲವು ಬಾರಿ ಔಷಧಿ ತೆಗೆದುಕೊಳ್ಳಲು ದುಡ್ಡು ಇರುವುದಿಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ ಎಂದು ಮಡಿವಾಳಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ನಾನು ಏನು ಪಾಪ ಮಾಡೇನಿ ಅಂಥಾ ದೇವ್ರು ನಂಗ ಈ ರೀತಿ ಶಿಕ್ಷೆ ಕೊಟ್ಟಾನ ಅಂತಾ ಗೊತ್ತಾಗವಲ್ದು, ಒಂದ್ ಕಡೆ ಪ್ರತಿ ತಿಂಗ್ಳ ವೃದ್ಧಾಪ್ಯ ವೇತನ ಬರ್ತಿಲ್ಲ, ಇನ್ನೊಂದಕಡೆ ಅಕ್ಕಿಯೂ ಇಲ್ಲ. ಹಿಂಗಾದ್ರ ನಮ್ಮಂಥವರು ಈ ಭೂಮಿ ಮ್ಯಾಲೆ ಹೆಂಗ್ ಜೀವನ ಸಾಗಿಸೋದು? ಎಂದು ಅನ್ನಭಾಗ್ಯ ಅಕ್ಕಿಗಾಗಿ ಪರದಾಡುತ್ತಿರುವ ವೃದ್ಧ ಮಡಿವಾಳಪ್ಪ ಮಡಿವಾಳರ ನೊಂದು ನುಡಿದರು.

ಈ ರೀತಿ ಪಡಿತರ ಕಾರ್ಡ್‌ಗಳ ಸಮಸ್ಯೆಯಾದವರಿಗೆ ರಿಯಾಯಿತಿ ಪಡಿತರ ಚೀಟಿ ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು. ಮೇಲಧಿಕಾರಿಗಳ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ವಸುಂಧರಾ ಹೆಗಡೆ ತಿಳಿಸಿದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ