ಹಾಸ್ಟೆಲ್‌ಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

KannadaprabhaNewsNetwork |  
Published : May 28, 2025, 12:45 AM IST
ಹಾವೇರಿ ತಾಲೂಕಿನ ಗಾಂಧಿಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿನಿಲಯದ ಎದುರು ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಎಸ್‌ಎಫ್‌ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿ, ನಿರಂತರ ಮಳೆಯಿಂದ ವಸತಿನಿಲಯದ ಕಿಟಕಿ ಬಾಗಿಲುಗಳಿಂದ ಮಳೆ ನೀರು ಕಟ್ಟಡ ಒಳಗಡೆ ಬರುತ್ತಿದೆ. ಕಿಟಕಿ, ಬಾಗಿಲು ಗ್ಲಾಸ್ ಹೊಡೆದು ಹೋಗಿ ವರ್ಷಗಳೆ ಕಳೆದು ಈವರೆಗೆ ಸರಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾವೇರಿ: ತಾಲೂಕಿನ ಗಾಂಧಿಪುರದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಆವರಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸದಿರುವುದು ಹಾಗೂ ಹಾಸ್ಟೆಲ್ ಸ್ಥಳಾಂತರ ಖಂಡಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಸತಿನಿಲಯದ ಎದುರು ಪ್ರತಿಭಟನೆ ನಡೆಸಿದರು. ವಸತಿನಿಲಯದಲ್ಲಿ ಸರಿಯಾದ ಉತ್ತಮ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಪುಸ್ತಕಗಳು, ಚಾವಣಿ ಸೇರಿದಂತೆ ಹಾಸ್ಟೆಲ್‌ನಲ್ಲಿ ಸೌಕರ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳದೆ ಕೇವಲ ಭರವಸೆ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.ಎಸ್‌ಎಫ್‌ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ ಕೊಪ್ಪಳದ ಮಾತನಾಡಿ, ನಿರಂತರ ಮಳೆಯಿಂದ ವಸತಿನಿಲಯದ ಕಿಟಕಿ ಬಾಗಿಲುಗಳಿಂದ ಮಳೆ ನೀರು ಕಟ್ಟಡ ಒಳಗಡೆ ಬರುತ್ತಿದೆ. ಕಿಟಕಿ, ಬಾಗಿಲು ಗ್ಲಾಸ್ ಹೊಡೆದು ಹೋಗಿ ವರ್ಷಗಳೆ ಕಳೆದು ಈವರೆಗೆ ಸರಿಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹತ್ತು ಕಿಲೋಮೀಟರ್ ದೂರದಲ್ಲಿರುವ ನೂತನ ವಸತಿನಿಲಯಕ್ಕೆ ಏಕಾಏಕಿ ಸ್ಥಳಾಂತರ ಎಂದರೆ ಆಗುವುದಿಲ್ಲ. ಈಗ ಸೆಮಿಸ್ಟರ್ ಅಂತಿಮ ಪರೀಕ್ಷೆ ಇರುವುದರಿಂದ ಹೊಸ ವಸತಿನಿಲಯಕ್ಕೆ ಹೊಂದಿಕೊಳ್ಳಲು ಆಗುವುದಿಲ್ಲ. ದೂರದ ನೂತನ ವಸತಿನಿಲಯಕ್ಕೆ ಹೋಗುವುದಿಲ್ಲವೆಂದು ನವೀನ್ ಬಡ್ಡಪ್ಪನವರ, ವಸಂತ ವಡ್ಡರ ಪಟ್ಟುಹಿಡಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ನಗರದಿಂದ ದೂರವಿರುವ ವಸತಿನಿಲಯಕ್ಕೆ ಮೂಲ ಸೌಕರ್ಯಗಳ ಅಗತ್ಯವಿದೆ. ಅನೇಕ ಬಾರಿ ಹೋರಾಟ, ಮನವಿ ನೀಡಿದರೂ ಅಧಿಕಾರಿಗಳ ಸರಿಯಾಗಿ ಸ್ಪಂದಿಸಿಲ್ಲ ಎಂದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಹಾಗೂ ತಾಲೂಕು ಅಧಿಕಾರಿ ಆಂಜನೇಯ ಹುಲ್ಲಾಳ ಅವರು, ವಸತಿನಿಲಯದ ವಾರ್ಡನ್ ಬಸವರಾಜ ದಲ್ಲಣ್ಣನವರ ಜತೆಗೆ ಪರಿಶೀಲನೆ ನಡೆಸಿ. ಪೊಲೀಸ್ ಅಧಿಕಾರಿಗಳ ಮಧ್ಯೆಪ್ರವೇಶದಿಂದ ವಿದ್ಯಾರ್ಥಿಗಳು ಎಸ್‌ಎಫ್‌ಐ ಮುಖಂಡರೊಂದಿಗೆ ಸಭೆ ನಡೆಸಿ ಹಾಸ್ಟೆಲ್ ಸ್ಥಳಾಂತರ ಪ್ರಕ್ರಿಯೆಯನ್ನು ಸದ್ಯಕ್ಕೆ ಕೈ ಬಿಡಲಾಗುವುದು. ಮೂಲ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ಈ ವೇಳೆ ವಿದ್ಯಾರ್ಥಿ ಮುಖಂಡರಾದ ಕೃಷ್ಣ ನಾಯಕ, ಅಭಿಷೇಕ ತಿಳವಳ್ಳಿ, ರಘು ಕರಿಯಮ್ಮನವರ, ಈರಪ್ಪ ಹರಿಜನ್, ಕುಶಾಲ ಲಮಾಣಿ, ಮಾಂತೇಶ ಮಾಯಕೊಂಡ, ಮಂಜುನಾಥ್ ಹುಲಮನಿ, ಸುನೀಲ್ ಲಮಾಣಿ, ನಾಗೇಂದ್ರ ಎಂ., ಕಿರಣ್ ಲಮಾಣಿ, ಅರುಣ್ ಕುಮಾರ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ