ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಸಂತಕವಿ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದ ಅವರು, ಕನಕದಾಸರು ರಾಜನಂತೆ ಅಧಿಕಾರ ಮತ್ತು ಸಂಪತ್ತು ಹೊಂದಿದ್ದರೂ ಎಲ್ಲವನ್ನೂ ತ್ಯಾಗ ಮಾಡಿ, ವಚನ ಹಾಗೂ ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಮಾಡಿ, ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಇಂದಿನ ಕಾಲದಲ್ಲಿ ಸಣ್ಣ ತ್ಯಾಗ ಮಾಡುವುದೂ ಕಷ್ಟವಾಗಿರುವಾಗ, ಅವರ ತ್ಯಾಗಮಯ ಜೀವನ ನಮಗೆಲ್ಲರಿಗೂ ಮಾದರಿಯಾಗಿದೆ. ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಬದಲಾಗಿ ಇಡೀ ದೇಶ ಹಾಗೂ ನಾಡಿನ ಶ್ರೇಷ್ಠ ಆಸ್ತಿಯಾಗಿದ್ದಾರೆ ಎಂದರು.
ಕನಕ ಭವನ ನಿರ್ಮಾಣದ ಭರವಸೆ: ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನದ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದ್ದು, ಶಾಸಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಅದನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ, ಮುಂದಿನ ಜಯಂತಿಯನ್ನು ಅದೇ ಭವನದಲ್ಲಿ ಆಚರಿಸುವ ಭರವಸೆ ನೀಡಿದರು.ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಮಾತನಾಡಿ, ಭಕ್ತ ಕನಕದಾಸರು ''''''''ತಿಮ್ಮಪ್ಪ ನಾಯಕ'''''''' ಎಂಬ ಹೆಸರಿನಲ್ಲಿ ಜನಿಸಿ, ಮೂಲತಃ ಪಾಳೇಗಾರರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಯುದ್ಧದ ಭೀಕರತೆಯನ್ನು ಕಂಡು ಮನನೊಂದು ತಮ್ಮ ಅಧಿಕಾರ, ಸಂಪತ್ತು ಎಲ್ಲವನ್ನೂ ತ್ಯಜಿಸಿ ಭಕ್ತಿ ಮಾರ್ಗದಲ್ಲಿ ತೊಡಗಿಸಿಕೊಂಡರು. ಕಾಗಿನೆಲೆ ಆದಿಕೇಶವ ಎಂಬ ಅಂಕಿತನಾಮದಲ್ಲಿ ನೂರಾರು ಕೀರ್ತನೆಗಳು ಹಾಗೂ ಮುಂಡಿಗೆಗಳನ್ನು ರಚಿಸುವ ಮೂಲಕ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದರು ಎಂದು ಹೇಳಿದರು.
ಸಮಾಜದ ಕಾರ್ಯದರ್ಶಿ ಹನುಮಂತಪ್ಪ ಜಾಲಿಬೆಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಾನಿಧ್ಯವನ್ನು ಮಟಮಾರಿ ಶಿವಾನಂದ ಮಠದ ಜ್ಞಾನಾನಂದ ಸ್ವಾಮಿ, ಲಕ್ಷ್ಮಣ ತಾತ, ಮುಂಡರಗಿಯ ಸದಾನಂದ ತಾತ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಹೊಸ ಅಧ್ಯಕ್ಷ ರುದ್ರಪ್ಪ ಅಂಗಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ಎಸಿ ಡಾ.ಹಂಪಣ್ಣ ಸಜ್ಜನ್, ಪಾಲಿಕೆಯ ಆಡಳಿತ ವಿಭಾಗದ ಉಪಆಯುಕ್ತ ಶರಣಪ್ಪ,ತಹಸೀಲ್ದಾರ್ ಸುರೇಶ್ ವರ್ಮಾ, ಸಮಾಜದ ಹಿರಿಯ-ಕಿರಿಯ ಮುಖಂಡರು,ಮಹಿಳೆಯರು,ಯುವಕರು, ನೌಕರರ ಸಂಘದವರು ಸೇರಿ ಅನೇಕರು ಇದ್ದರು.
ಸಂತಕವಿ ಕನಕದಾಸರ ಜಯಂತಿ ಪ್ರಯುಕ್ತ ಗಂಜ್ ಸಮೀಪದಲ್ಲಿರುವ ಕನಕದಾಸರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದ, ನಂತರ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಚಾಲನೆ ನೀಡಿದರು. ಮೆರವಣಿಗೆಯು ಗಂಜ್ ವೃತ್ತ ದಿಂದ ಆರಂಭವಾಗಿ ಚಂದ್ರ ಮೌಳೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗಮಂದಿರಕ್ಕೆ ಬಂದು ತಲುಪಿತು.
ಸಿಂಧನೂರು: ಸಮಾನತೆಯ ಸಮಾಜ ನಿರ್ಮಿಸುವುದು ಕನಕದಾಸರ ಆಶಯವಾಗಿತ್ತು. ಅದಕ್ಕಾಗಿ ಕೀರ್ತನೆಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದರು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಮುದಗಲ್: ಪಟ್ಟಣದ ಪುರಸಭೆ ಕಾರ್ಯಾಲಯ, ನಾಡ ಕಾರ್ಯಾಲಯ, ಶಾಖಾ ಗ್ರಂಥಾಲಯ, ರೈತ ಸಂಪರ್ಕ ಕೇಂದ್ರ, ಉಪ್ಪಾರಪೇಟೆ ಶಾಲೆ , ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟೂರ, ಕನಕದಾಸರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.