ಕೊಪ್ಪಳ: ಮಕ್ಕಳು ತಾವು ಬರೆದ ಕಥೆ, ಕವನ ಪುಸ್ತಕ ರೂಪದಲ್ಲಿ ಬಿಡುಗಡೆಯಾಗಿದ್ದು, ಪುಸ್ತಕದಲ್ಲಿ ತಮ್ಮ ಹೆಸರು, ಶಾಲೆಯ ಹೆಸರು ಪ್ರಕಟಗೊಂಡಿದ್ದನ್ನು ನೋಡಿ ಕುಣಿದು ಕುಪ್ಪಿಳಿಸಿದರು.
ಇದು ಗಿಣಗೇರಾದ ಎಲೆ, ಮಣ್ಣು ಮತ್ತು ಸಂಶ್ಲೇಷಣಾ ಕೇಂದ್ರದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಕಂಡು ಬಂದ ದೃಶ್ಯಗಳು.ಗಿಡ-ಮರಗಳ ಮಧ್ಯೆ ಹಸಿರು ಮಂಟಪ ಮಾಡಿಕೊಂಡು ಹನುಮನಹಳ್ಳಿಯ ಮಕ್ಕಳು ''''ಗುಳಿಗೆ ಗುಮ್ಮ'''' ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿ ಚಪ್ಪಾಳೆ ಗಿಟ್ಟಿಸಿದರು. ನೆಲ, ಜಲ ಸಂರಕ್ಷಣೆ, ಜಲಮರುಪೂರಣದಿಂದ ಸುಸ್ಥಿರ ಪರಿಸರ ಅಭಿವೃದ್ಧಿಯ ಪಾಠ ಇದರಲ್ಲಿತ್ತು. ಒಂದು ಗಂಟೆಗಳ ಕಾಲ ನಾಟಕ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟಿತ್ತು.ಪ್ರಶಸ್ತಿ ವಿತರಿಸಿ ಮಾತಾನಾಡಿದ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಮಂಜುನಾಥ, ಇದೊಂದು ಅವಿಸ್ಮರಣೀಯ ಗಳಿಗೆ. ಇಂಥ ವಾತಾವರಣದ ಮಧ್ಯೆ ನಿಮ್ಮೊಟ್ಟಿಗೆ ಒಗ್ಗೂಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಮಕ್ಕಳಿಂದ ರಚಿತವಾದ ಪುಸ್ತಕಗಳನ್ನು ರಾಜ್ಯಾದ್ಯಂತ ಎಲ್ಲ ಗ್ರಂಥಾಲಯಗಳಿಗೆ ಸರಬರಾಜು ಮಾಡಲಾಗುವುದು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಮಾತನಾಡಿ, ಮೂರು ದಿನಗಳಲ್ಲಿ ಕಥೆ, ಕವನ, ನಾಟಕ ಬರೆದು ನೀವೇ ನಿರ್ದೇಶನ ಮಾಡಿಕೊಂಡು ಅಭಿವ್ಯಕ್ತಿಸಿದ್ದೀರಿ. ನಿಮ್ಮೊಳಗೆ ಅದ್ಭುತವಾದ ಚಿಂತನಾ ಸಾಮರ್ಥ್ಯವಿದೆ. ಇದನ್ನು ಬೆಳೆಸಿಕೊಂಡು ಹೋಗಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಗಿಣಗೇರಾ ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಮೇಟಿ ಮಾತನಾಡಿ, ಮಕ್ಕಳ ಶ್ರೇಯೋಭಿವೃದ್ಧಿಗೆ ಈ ತರಹದ ಶಿಬಿರಗಳು ತುಂಬ ಪ್ರಯೋಜನಕಾರಿ. ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಓದು, ಆಟ-ಪಾಠದೊಂದಿಗೆ ಇತರ ಕೌಶಲಗಳನ್ನು ಮಕ್ಕಳು ವೃದ್ಧಿಸಿಕೊಳ್ಳಬೇಕೆಂದು ನುಡಿದರು.ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ನೀಲಪ್ಪ ಮೂರುಮನಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸಹಾಯಕ ನಿರ್ದೇಶಕ ಮಹೇಶ, ಪಿಡಿಒ ಮಂಜುಳಾ, ಶಂಕರ ಬಿನ್ನಾಳ, ವೈ.ಬಿ. ಮೇಟಿ, ಹನುಮಂತ ಕುರಿ, ಅಜಿತ, ಸಂಜಯ, ರಾಮಣ್ಣ ಶ್ಯಾವಿ, ಲಕ್ಷ್ಮಣ ಪಿರಗಾರ ಮತ್ತಿತರರು ಉಪಸ್ಥಿತರಿದ್ದರು. ವಿರೇಶ ಮೇಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಣೇಶ ಸ್ವಾಗತಿಸಿದರು. ಮಂಜು ಕುದುರಿ ವಂದಿಸಿದರು.