ಸಂಶೋಧನಾ ಮನೋಭಾವವಿಲ್ಲದ ಎಂಜಿನಿಯರ್ ಎಂಜಿನ್ ಇಲ್ಲದ ವಾಹನದಂತೆ: ಡಾ. ಎಸ್.ಎಂ. ಶಶಿಧರ

KannadaprabhaNewsNetwork |  
Published : May 26, 2025, 12:18 AM IST
ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಲಾಗಿದ್ದ ಮೂರು ದಿನಗಳ 'ಸಂಶೋಧನಾ ವಿಧಾನಗಳು' ಕುರಿತ ಕಾರ್ಯಾಗಾರಕ್ಕೆ ಡಾ. ಎಸ್.ಎಂ. ಶಶಿಧರ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಪ್ರತಿಯೊಂದು ಸಮಸ್ಯೆಯೂ ಹೊಸ ಆವಿಷ್ಕಾರಕ್ಕೆ ದಾರಿಯಾಗಬಲ್ಲದು.

ಸಂಶೋಧನಾ ವಿಧಾನಗಳು ಕುರಿತ ಕಾರ್ಯಾಗಾರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಪ್ರತಿಯೊಂದು ಸಮಸ್ಯೆಯೂ ಹೊಸ ಆವಿಷ್ಕಾರಕ್ಕೆ ದಾರಿಯಾಗಬಲ್ಲದು ಎಂದು ಮುನಿರಾಬಾದ್‌ನ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ (ಇಂಡಿಯಾ) ಅಧ್ಯಕ್ಷ ಡಾ. ಎಸ್.ಎಂ. ಶಶಿಧರ ಅಭಿಪ್ರಾಯಪಟ್ಟರು. ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನ (ಆರ್.ವೈ.ಎಂ.ಇ.ಸಿ.) ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗ ಹಮ್ಮಿಕೊಂಡಿರುವ ಮೂರು ದಿನಗಳ ''''''''ಸಂಶೋಧನಾ ವಿಧಾನಗಳು'''''''' ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಸ್ಯೆ ಎನ್ನುವುದು ಸಂಶೋಧನೆಯ ಬೀಜವಾಗಿದೆ. ಸಂಶೋಧನೆ ವೇಳೆ ಎದುರಾಗುವ ಪ್ರತಿಯೊಂದು ಸಮಸ್ಯೆಯೂ ಹೊಸ ವಿಚಾರವನ್ನು ಕಲಿಸುತ್ತದೆ. ಹೊಸ ಆವಿಷ್ಕಾರಕ್ಕೆ ಹೊಸ ಹಾದಿಯನ್ನು ಸೃಷ್ಟಿಸುತ್ತದೆ ಎಂದರು.

ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಎಲೆಕ್ಟ್ರಿಕ್ ವಾಹನಗಳ ಸಂಶೋಧನೆಗೆ ದಾರಿಯಾದವು. ಅಂಗವಿಕಲರಿಗೆ ನಡೆದಾಡುವ ಕಷ್ಟವನ್ನು ಪರಿಹರಿಸಲು ವೀಲ್‌ಚೇರ್ ಸಂಶೋಧನೆಯಾಯಿತು. ಪ್ರತಿಯೊಂದು ಆವಿಷ್ಕಾರವೂ ಸಮಸ್ಯೆಯಿಂದ ಹುಟ್ಟುತ್ತದೆ. ಸಂಶೋಧನೆ ಎಂದರೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯುವ ಕಲೆಯಾಗಿದೆ ಎಂದು ತಿಳಿಸಿದರಲ್ಲದೆ, ಸಂಶೋಧನಾ ಮನೋಭಾವವಿಲ್ಲದ ಎಂಜಿನಿಯರ್ ಎಂಜಿನ್ ಇಲ್ಲದ ವಾಹನದಂತೆ ಎಂದು ಹೇಳಿದರು.

ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಕಾರ್ಯದರ್ಶಿ ಡಾ. ಪಿ. ಶರತ್ ಕುಮಾರ್ ಮಾತನಾಡಿ, ಸಂಶೋಧನೆಗೆ ನೆರವು ನೀಡುವ ಅನೇಕ ಸಂಸ್ಥೆಗಳಿವೆ. ಅವುಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳು ಕೇವಲ ಅಂಕಗಳಿಗಾಗಿ ಇರಬಾರದು, ಅವು ಭವಿಷ್ಯದ ತಂತ್ರಜ್ಞಾನದ ತಳಹದಿಯಾಗಬೇಕು ಎಂದು ತಿಳಿಸಿದರು.

ಉಪ ಪ್ರಾಂಶುಪಾಲೆ ಡಾ. ಸವಿತಾ ಸೋನೋಳಿ ಮಾತನಾಡಿ, ಕಾರ್ಯಾಗಾರಗಳು ಯುವ ಸಂಶೋಧಕರಿಗೆ ದಾರಿದೀಪವಾಗುತ್ತವೆ. ಸಂಶೋಧನೆಯ ಅವಕಾಶಗಳು ಎಲ್ಲೆಡೆ ಇವೆ, ಆದರೆ ಅವುಗಳನ್ನು ಗುರುತಿಸಲು ಆವಿಷ್ಕಾರದ ದೃಷ್ಟಿಯ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಡಾ. ಕಮ್ಮಾರ ಕಿಶೋರ್ ಕುಮಾರ್ ಹಾಗೂ ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ವೀರಭದ್ರಪ್ಪ ಆಲಗೂರು ಸಂಶೋಧನೆಯ ಅಗತ್ಯ ಹಾಗೂ ಅದರಿಂದಾಗುವ ಪ್ರಯೋಜನೆಗಳು ಕುರಿತು ಮಾತನಾಡಿದರು.

ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಕೋರಿ ನಾಗರಾಜ್, ಕಾರ್ಯಕ್ರಮದ ಸಂಯೋಜಕ ಡಾ. ಚಂದ್ರಗೌಡ, ಡಾ. ಕೆ.ಮಂಜುನಾಥ, ಎಂ.ಬಾಲಾಜಿ, ಕೆ.ಬಿ. ಅಚ್ಯುತಾನಂದ ಹಾಗೂ ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ