ಕನ್ನಡಪ್ರಭ ವಾರ್ತೆ ಯಳಂದೂರು
ಚರಂಡಿಯಿಲ್ಲದೆ ರಸ್ತೆಯಲ್ಲೇ ಮಡುಗಟ್ಟಿ ನಿಂತಿರುವ ಕಲುಷಿತ ನೀರು, ಈ ನೀರ ಮೇಲೆಲ್ಲಾ ಸೊಳ್ಳೆಗಳ ಹಿಂಡು, ಮಳೆ ಬಂದರೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಕಲುಷಿತ ನೀರು, ಹಳ್ಳ ಬಿದ್ದ ರಸ್ತೆಗಳಲ್ಲಿ ಸಾಗುವ ಅನಿವಾರ್ಯತೆ ಈ ದುಸ್ಥಿತಿ ತಾಲೂಕಿನ ದುಗ್ಗಹಟ್ಟಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಕಂದಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ಸ್ಥಿತಿಗತಿ ಆಗಿದೆ.ಕಲುಷಿತ ನೀರಿನ ಚರಂಡಿಯ ಮೇಲೆ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಕೂಡ ಒಡೆದಿದ್ದು, ಈ ಬಡಾವಣೆಯಿಂದ ಅಂಬಳೆ ಗ್ರಾಮದ ಚಾಮುಂಡೇಶ್ವರಿ ದೇಗುಲಕ್ಕೆ ಸಾಗುವ ಪ್ರಮುಖ ರಸ್ತೆಯಲ್ಲಿರುವ ಈ ಬೀದಿಯಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಇದ್ದ ಹಳೇ ಚರಂಡಿ ಮುಚ್ಚಿ ಹೋಗಿದ್ದು ಕೊಚ್ಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಈ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದ ಕಚ್ಚಾ ರಸ್ತೆಯಾಗಿದೆ. ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ಬಂದರೆ ಇಲ್ಲಿನ ಚರಂಡಿಯ ಕೊಚ್ಚೆ ನೀರು ಮನೆಗಳಿಗೆ ನುಗ್ಗುತ್ತದೆ. ಇಲ್ಲಿರುವ ಅನೇಕ ಮನೆಗಳು ಕಚ್ಚಾ ಮನೆಗಳಾಗಿದ್ದು ಅನೇಕ ಮನೆಗಳ ಗೋಡೆಗಳು ಬಿದ್ದು ಹೋಗಿವೆ. ಇಲ್ಲಿಗೆ ಚರಂಡಿ ನಿರ್ಮಿಸಿ ನೀರು ಸರಾಗವಾಗಿ ಹಾದು ಹೋಗುವಂತೆ ಮಾಡಿ, ಇಲ್ಲಿಗೆ ಚರಂಡಿ ನಿರ್ಮಿಸಿ ರಸ್ತೆ ನಿರ್ಮಿಸಿ ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗಳಾದ ಪುಟ್ಟನಂಜಮ್ಮ ಅವರ ದೂರು ಆಗಿದೆ.
ನಮ್ಮ ಬಡಾವಣೆಯಲ್ಲಿ ಚರಂಡಿ ನಿರ್ಮಿಸುವಂತೆ ದುಗ್ಗಹಟ್ಟಿ ಗ್ರಾಪಂ ಹಾಗೂ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ನಮ್ಮ ಮನವಿಗೆ ಸ್ಪಂದನೆ ಲಭಿಸುತ್ತಿಲ್ಲ. ಇಲ್ಲಿ ಸೊಳ್ಳೆ, ಕ್ರಿಮಿಕೀಟಗಳ ಆವಾಸ ಹೆಚ್ಚಾಗಿದೆ. ಈಗ ಮಳೆಗಾಲವಾಗಿದ್ದು ಮಲೇರಿಯಾ, ಡೆಂಘೀ ಹರಡುವ ಭೀತಿ ಇದೆ. ಈ ಬಗ್ಗೆ ಡಿಸಿ ಸೂಕ್ತ ಕ್ರಮ ವಹಿಸಿ.-ಪ್ರೀತಿ, ಕಂದಹಳ್ಳಿ ಗ್ರಾಮ ನಿವಾಸಿ
ದುಗ್ಗಹಟ್ಟಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಮೂಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಆದಷ್ಟು ಬೇಗ ಸ್ವಚ್ಚತೆಗೆ ಆದ್ಯತೆ ನೀಡಲಾಗುವುದು. ರಸ್ತೆ ದುರಸ್ತಿಗೆ ಸಂಬಂಧಪಟ್ಟಂತೆ ಮೇಲಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗುವುದು.-ಬಸವಣ್ಣ, ಪಿಡಿಒ, ದುಗ್ಗಹಟ್ಟಿ