ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ

KannadaprabhaNewsNetwork |  
Published : Jul 26, 2026, 02:15 AM IST
ಶಿಗ್ಗಾಂವಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ)  ಸಮಾವೇಶವನ್ನು ಶಾಸಕ ಯಾಸೀರ ಅಹ್ಮದಖಾನ್‌ ಪಠಾಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಶಾಲೆಯಲ್ಲಿ ಓದಲು ಬರುವ ಮಕ್ಕಳಿಗೆ ಎರಡನೇ ತಾಯಿ ಇದ್ದಂತೆ. ನಿಮಗೆ ಶಕ್ತಿ ತುಂಬಲು ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ್‌ ಪಠಾಣ ಹೇಳಿದರು.

ಶಿಗ್ಗಾಂವಿ (ಗ್ರಾಮೀಣ): ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಶಾಲೆಯಲ್ಲಿ ಓದಲು ಬರುವ ಮಕ್ಕಳಿಗೆ ಎರಡನೇ ತಾಯಿ ಇದ್ದಂತೆ. ನಿಮಗೆ ಶಕ್ತಿ ತುಂಬಲು ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ್‌ ಪಠಾಣ ಹೇಳಿದರು.

ಪಟ್ಟಣದ ಸಂಗನ ಬಸವ ಕಲ್ಯಾಣ ಮಂಟಪದಲ್ಲಿ ಜರುಗಿದ ಶಿಗ್ಗಾಂವಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನೀವು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಕೆಲಸಕ್ಕೆ ನಿಮಗೆ ನೀಡುತ್ತಿರುವ ಗೌರವಧನ ಎಂಬ ಹಣವು ಅಲ್ಪವಾಗಿದ್ದು ನಿಮ್ಮ ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ನೀವು ನೀಡಿರುವ ಮನವಿಯಂತೆ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಎಐಟಿಯುಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಪ್ರಧಾನ ಕಾರ್ಯದರ್ಶಿಯಾದ ಎಂ. ಜಯಮ್ಮ ಮಾತನಾಡಿ, ಮಕ್ಕಳು ಮೊದಲು ದೈಹಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಮುಂದಿನ ಜೀವನಕ್ಕೆ ತಯಾರಾಗುವಂತೆ ಅವರಿಗೆ ಎಲ್ಲ ತರಹದ ಶಿಕ್ಷಣ ಹಾಗೂ ಆಹಾರ ಪದಾರ್ಥಗಳನ್ನು ನೀಡಿ ಬೆಳೆಸುವುವಲ್ಲಿ ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ ಎಂದರು. ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಅಧಿಕಾರಕ್ಕೆ ಬಂದರೆ ಆರನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವ ಧನ ಹೆಚ್ಚಿಸುವುದಾಗಿ ತಿಳಿಸಿದ್ದು ಅದರಂತೆ ಕಾರ್ಯಕರ್ತೆಯರಿಗೆ ಮಾಸಿಕ ₹ 15,000 ಹಾಗೂ ಸಹಾಯಕಿಯರಿಗೆ ₹ 10,000 ಗಳನ್ನು ಗೌರವಧನ ಹೆಚ್ಚಿಸಬೇಕು. ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆ ಖಾಲಿ ಇದ್ದು ಕಾರ್ಯಕರ್ತೆಯರಿಗೆ ಒಂದು ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಕರ್ತವ್ಯ ನಿಮಿತ್ತ ನಿಯೋಜನೆಗೊಂಡಾಗ ನೀಡುವ ಪ್ರಭಾರಭತ್ಯೆ ವೇತನದ ಅರ್ಧದಷ್ಟು ವೇತನಕ್ಕನುಗುಣವಾಗಿ ಹೆಚ್ಚಿಸಬೇಕು. ಗ್ರಾಮೀಣ ಕಾರ್ಯಕರ್ತೆಯರಿಗೆ ನೀಡುವಂತಹ ಡಿ.ಎ ಸೌಲಭ್ಯವನ್ನು ಪಟ್ಟಣದ ಕಾರ್ಯಕರ್ತೆಯರಿಗೂ ನೀಡಬೇಕು. 2011ರಿಂದಲೇ ನಿವೃತ್ತಗೊಂಡು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಗ್ರಾಚ್ಯುಟಿ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿಯೇ LKG-UKG ಗಳನ್ನು ಪ್ರಾರಂಭಿಸಿ ಅಂಗನವಾಡಿ ವ್ಯವಸ್ಥೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೂ ಈ ಋತು ಚಕ್ರದ ರಜಾ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ಎಲ್ಲಾ ಕಾಯಿಲೆಗಳು ಮತ್ತು ಎಲ್ಲಾ ಆಸ್ಪತ್ರೆಗಳಲ್ಲೂ ಸಂಬಳ ಸಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸಬೇಕು. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಗುರುತಿಸುವಿಕೆಯ ಪ್ರಾಮಾಣಿಕ ಕರ್ತವ್ಯದಿಂದ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕೆಲವು ಜನರಿಂದ ಕಾರ್ಯಕರ್ತೆಯರಿಗೆ ತೊಂದರೆಯಾಗುತ್ತಿದ್ದು, ಈ ಕೆಲಸದಿಂದ ಹಾಗೂ ಬಿ.ಎಲ್.ಒ. ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕು. ಚುನಾವಣೆಯ ಕರ್ತವ್ಯಕ್ಕೆ ಕಾರ್ಯಕರ್ತೆಯರನ್ನು ನಿಯೋಜಿಸಿದ್ದು ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸುವಾಗ ನಿಧನರಾದರೆ ಸರ್ಕಾರ ಚುನಾವಣಾ ಆಯೋಗ ಪರಿಹಾರವನ್ನು ಇತರೆ ನೌಕರರಿಗೆ ನೀಡಿದಂತೆ 30 ಲಕ್ಷ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷರಾದ ಬಿ. ಅಮ್ಮದ್, ಎಐಟಿಯುಸಿ ತಾಲೂಕು ಅಧ್ಯಕ್ಷರಾದ ಲಲಿತಾ ಚಂದ್ರಗೌಡ್ರ ನಾಗನಗೌಡ್ರ, ಜಿಲ್ಲಾ ಗ್ಯಾರಂಟಿ ಉಪಾದ್ಯಕ್ಷರಾದ ಗುಡ್ಡಪ್ಪ ಜಲದಿ, ಹಜರತಅಲಿ ಚೂಡಿಗಾರ, ಗೌಸಖಾನ ಮುಖಾಶಿ, ಚಂದ್ರಣ್ಣ ಕೊಡ್ಲಿವಾಡ, ಸುಭಾಸ ಮಜ್ಜಗಿ, ಹನುಮಂತಪ್ಪ ಅಗಸಿಬಾಗಿಲು, ಹನುಮಂತಪ್ಪ ಕಬ್ಬಾರ, ಸರಸ್ವತಿ ಸಾತಪತಿ, ತಿಪ್ಪವ್ವ ಜವಳಗಟ್ಟಿ ಇದ್ದರು. ಸುನಂದಾ ಎಸ್. ರೇವಣಕರ ಕಾರ್ಯಕ್ರಮದ ನಿರೂಪಣೆ ಮಾಡಿದರು. ‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದಂತೆ ಕಠಿಣ ಕ್ರಮ: ಜೋಶಿ
ಬರಗಾಲದ ಬೇಗೆಯಲ್ಲಿ ತೋಟಗಾರಿಕೆ ಬೆಳೆಗಾರರು ಕಂಗಾಲು