ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನಿಂದ ಆಯೋಜನೆ. ಮಾಜಿ ಸಚಿವ ಆಂಜನೇಯ ಮಾಹಿತಿ ಕನ್ನಡಪ್ರಭವಾರ್ತೆ, ಚಿತ್ರದುರ್ಗ ರಾಜ್ಯಸಭಾ ಸದಸ್ಯ ಸಿಡಬ್ಲ್ಯುಸಿ ಮೆಂಬರ್ ಡಾ.ಸೈಯದ್ ನಾಸಿರ್ ಹುಸೇನ್‌ಗೆ ಡಾ.ಬಿ.ಆರ್ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಅ.22 ರಂದು ಬೆಳಗ್ಗೆ 10-30 ಕ್ಕೆ ತರಾಸು ರಂಗಮಂದಿರದಲ್ಲಿ ಹೃದಯಸ್ಪರ್ಶಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಸಚಿವ ಆಂಜನೇಯ, ಚಿತ್ರದುರ್ಗದ ಮೂಲದವರೇ ಆದ ಸೈಯದ್ ನಾಸಿರ್ ಹುಸೇನ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಅಗಾಧ ಪ್ರಮಾಣದಲ್ಲಿ ಬೆಳೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೆ ನಾಯಕತ್ವ ಗುಣ ಮೈಗೂಡಿಸಿಕೊಂಡಿದ್ದ ಅವರು ಬಳ್ಳಾರಿ, ನವದೆಹಲಿಯಲ್ಲಿ ಶಿಕ್ಷಣ ಪಡೆದಿದ್ದಾರೆ. ರಾಜ್ಯಸಭಾ ಸದಸ್ಯ, ಸಿಡಬ್ಲ್ಯುಸಿ ಮೆಂಬರ್ ಆಗುವ ಮೂಲಕ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದ್ದಾರೆ. ನೆಹರು, ಇಂದಿರಾಗಾಂಧಿ, ಲಾಲ್‍ಬಹದ್ದೂರ್ ಶಾಸ್ತ್ರಿ, ಡಾ.ಬಾಬು ಜಗಜೀವನರಾಂ ಇವರುಗಳು ಸಿಡಬ್ಲ್ಯುಸಿ ಸದಸ್ಯರಾಗಿದ್ದರು. ಅವರ ರಾಜಕೀಯ ನಡೆ ಯುವಕರಿಗೆ ಸ್ಫೂರ್ತಿಯಾದ ಹಿನ್ನಲೆಯಲ್ಲಿ ಸನ್ಮಾನಿಸುವ ಕಾರ್ಯ ಆಯೋಜಿಸಲಾಗಿದೆ ಎಂದರು. ಇಂದಿನ ಯುವಕರಲ್ಲಿ ಹೋರಾಟದ ಮನೋಭಾವ ಕಮ್ಮಿಯಾಗುತ್ತಿದೆ. ಬದ್ಧತೆಯಿಲ್ಲ. ಕೆಳಹಂತದಿಂದ ಕೆಲಸ ಮಾಡಿದಾಗ ಮಾತ್ರ ರಾಜಕೀಯದಲ್ಲಿ ಉನ್ನತ ಸ್ಥಾನ ಗಳಿಸಬಹುದು. ಅಪಾರ ಪಾಂಡಿತ್ಯ, ಬುದ್ದಿವಂತಿಕೆ, ಸಂಘಟನಾ ಸಾಮರ್ಥ್ಯ ಇರುವ ನಾಸೀರ್ ಹುಸೇನ್ ಭವಿಷ್ಯದಲ್ಲಿ ಅನೇಕ ಸ್ಥಾನ ಮಾನಗಳ ಅಲಂಕರಿಸವ ಸಾಧ್ಯತೆಗಳಿವೆ ಎಂದರು. ತರಾಸು ರಂಗಮಂದಿರದಲ್ಲಿ ನಡೆಯುವ ಸನ್ಮಾನ ಸಮಾರಂಭವನ್ನು ಕಾನೂನು ಮತ್ತು ಸಂಸದೀಯ ಸಚಿವಧೆಚ್.ಕೆ.ಪಾಟೀಲ್ ಉದ್ಘಾಟಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಸಚಿವ ನಾಗೇಂದ್ರ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲೆಯ ಎಲ್ಲಾ ಶಾಸಕರು, ಅನೇಕ ಗಣ್ಯರು ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ನುಡಿದರು. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ನ್ಯಾಯವಾದಿ ಬೀಸ್ನಳ್ಳಿಜಯಣ್ಣ, ಸೈಯದ್ ಅಲ್ಲಾಭಕ್ಷಿ, ಅಬ್ದುಲ್ಲಾ, ಚಾಂದ್‍ಪೀರ್, ಡಾ.ರಹಮತ್‍ವುಲ್ಲಾ ಇನ್ನು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ---------------
ಟಿಕೆಟ್ ಗೆ ಅಪ್ಲಿಕೇಶನ್ ಹಾಕೋಲ್ಲ ಚಿತ್ರದುರ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿ ತಾವು ಅರ್ಜಿ ಹಾಕುವುದಿಲ್ಲವೆಂದು ಮಾಜಿ ಸಚಿವ ಆಂಜನೇಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇದ್ದಾರೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ಪಕ್ಷ ತೀರ್ಮಾನಿಸುತ್ತದೆ. ಈಗಾಗಲೇ ಎಐಸಿಸಿಯಿಂದ ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಜನರು ಹಾಗೂ ಜನಪ್ರತಿನಿಧಿಗಳ ಒಲವು ಯಾರಕಡೆ ಇದೆ ಎಂಬುದ ಅವಲೋಕಿಸಿದ ನಂತರವೇ ಪಕ್ಷದ ಹೈಕಮಾಂಡ್ ಟಿಕೆಟ್ ನಿರ್ಧರಿಸುತ್ತದೆ ಎಂದರು. ಮೊದಲಿನಿಂದಲೂ ಸಾಮಾಜಿಕ ನ್ಯಾಯದ ಪರವಾಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಎಲ್ಲಾ ಗ್ಯಾರೆಂಟಿಗಳನ್ನು ಜಾರಿಗೆ ತಂದಿರುವುದರಿಂದ ದೇಶದ ಪ್ರಧಾನಿ ಮೋದಿ ತತ್ತರಿಸಿ ಹೋಗಿದ್ದಾರೆ. ಶ್ರೀಲಂಕಾ-ಪಾಕಿಸ್ತಾನದಲ್ಲಿ ತಿನ್ನಲು ಅನ್ನವಿಲ್ಲದಂತಾಗಿದೆ. ಅಂತಹ ದುರ್ಗತಿ ನಮ್ಮ ರಾಜ್ಯಕ್ಕೆ ಇನ್ನು ಬಂದಿಲ್ಲ. ನುಡಿದಂತೆ ನಡೆಯುವ ಪಕ್ಷ ನಮ್ಮದು ಎಂದರು. ---------------