ಚರಕ ಉತ್ಸವ ಸಮಾರಂಭ । ಚೋರ ಚರಣದಾಸ ನಾಟಕ
ಸಾಗರ: ನಗರ ಹಾಗೂ ಗ್ರಾಮೀಣ ಹೆಣ್ಣುಮಕ್ಕಳ ನಡುವಿನ ಅಂತರ ಕಡಿಮೆಯಾಗಬೇಕು ಎಂದು ಗ್ರಾಮಸೇವಾ ಸಂಘದ ಹಿರಿಯ ಸಲಹೆಗಾರ ವೆಂಕಟನಾಥನ್ ಹೇಳಿದರು.ತಾಲೂಕಿನ ಹೊನ್ನೆಸರದಲ್ಲಿ ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಚರಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಗ್ರಾಮೋದ್ಯೋಗದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಚರಕ ಸ್ವದೇಶಿ ಚಳವಳಿಯ ಪ್ರಮುಖ ಅಂಗವಾಗಿದೆ. ಇದು ದೇಶಾದ್ಯಂತ ಪಸರಿಸಬೇಕು. ಗ್ರಾಮೀಣ ಮಹಿಳೆಯರ ದುಡಿಮೆಯ ಮತ್ತು ಆರ್ಥಿಕತೆಯ ಸ್ವಾಭಿಮಾನದ ಸಂಕೇತವಾಗಿ ಚರಕ ಪರಿವರ್ತನೆಗೊಂಡಿದೆ. ಇದೊಂದು ಚಳವಳಿಯ ರೂಪವಾಗಿದ್ದು, ಕೈಮಗ್ಗ ವಸ್ತುಗಳ ಉತ್ಪಾದನೆ ಮತ್ತು ಮಾರಾಟದ ಪ್ರಮಾಣ ಹೆಚ್ಚಬೇಕು ಎಂದು ಹೇಳಿದರು.ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಮಾತನಾಡಿ, ಕೈಮಗ್ಗ ಖಾದಿ ವಸ್ತುಗಳಿಗೆ ಎಲ್ಲಾ ಕಾಲದಲ್ಲೂ ಬೇಡಿಕೆ ಇದೆ. ಬೇಡಿಕೆ ಇರುವ ಕೈಮಗ್ಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂತಾಗಬೇಕು. ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಿದರೆ ಗ್ರಾಮೀಣ ಉತ್ಪಾದನಾ ಶಕ್ತಿಯನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಚರಕ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಸಂಕೇತವಾಗಿದೆ. ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಗಾಂಧಿಜಿ ಕನಸು ಸಾಕಾರಗೊಂಡಿದೆ. ಇದೊಂದು ಅನುಭವ ಮಂಟಪವಾಗಿ ರೂಪುಗೊಂಡಿದೆ. ಕೈಮಗ್ಗ ಮತ್ತು ಖಾದಿ ಉತ್ಪನ್ನಗಳಿಗೆ ಸರ್ಕಾರ ಪ್ರಾತಿನಿಧ್ಯ ನೀಡಬೇಕು ಎಂದರು.ಜೀವನ್ಮುಖಿ ತಂಡದಿಂದ ಚೌಡಿಕೆ ಕುಣಿತ, ಮೈಸೂರಿನ ನಟನಂ ಪಯಣ ತಂಡದಿಂದ ಚೋರ ಚರಣದಾಸ ನಾಟಕ ಪ್ರದರ್ಶನಗೊಂಡಿತು. ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಭೀಮನಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್.ನಾಗರಾಜ್ ಮಾತನಾಡಿದರು. ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪದ್ಮಶ್ರೀ ನಿರೂಪಿಸಿದರು.