ಕನ್ನಡಪ್ರಭ ವಾರ್ತೆ, ತುಮಕೂರುಪುಸ್ತಕ ಅಧ್ಯಯನವು ಜ್ಞಾನ ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಪುಸ್ತಕ ಅಧ್ಯಯನವನ್ನು ಲಘುವಾಗಿ ಪರಿಗಣಿಸಬಾರದು, ಅಧ್ಯಯನದಿಂದ ವ್ಯಕ್ತಿಯ ಅಭ್ಯುದಯ ಸಾಧ್ಯವಾಗುತ್ತದೆ ಎಂದು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಹೇಳಿದರು.ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಸೋಮವಾರ ರೋಟರಿ ತುಮಕೂರು, ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ರೀಡ್ ಬುಕ್ ಫೌಂಡೇಶನ್ ಸಂಸ್ಥೆಗಳು ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಸ್ವಾಮೀಜಿ, ವಿದ್ಯಾರ್ಥಿಗಳು, ಯುವಜನರು ಆದರ್ಶ ನಡವಳಿಕೆ, ಜ್ಞಾನ, ಬುದ್ಧಿವಂತಿಕೆ, ಆಲೋಚನಾ ಸಾಮರ್ಥ್ಯ ಬೆಳೆಸಿಕೊಳ್ಳಲು ಅಧ್ಯಯನ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.ಬುದ್ಧಿವಂತಿಕೆ ಮತ್ತು ದುಡ್ಡಿನ ನಡುವೆ ಗೆಲ್ಲುವುದು ಬುದ್ಧಿಯಂತಿಕೆ ಹೊರತು ದುಡ್ಡಲ್ಲ. ಸರಸ್ವತಿ ಇರುವ ಕಡೆಗೆ ಲಕ್ಷ್ಮಿಯನ್ನು ಬರುವಂತೆ ಮಾಡಿಕೊಳ್ಳಬೇಕು. ದಾರಿತಪ್ಪುವ ವಿಚಾರಗಳಿಗೆ ನಮ್ಮ ಮಕ್ಕಳು ಬಲಿಯಾಗಬಾರದು, ಅವರು ಸರಿದಾರಿಯಲ್ಲಿ ಸಾಗಲು, ಆಲೋಚನೆಗಳನ್ನು ಉದಾತ್ತಗೊಳಿಸಿಕೊಳ್ಳಲು ಜ್ಞಾನ, ತಿಳುವಳಿಕೆ ನೀಡುವ ಪುಸ್ತಕಗಳ ಅಧ್ಯಯನ ಅಗತ್ಯ. ವಿದ್ಯಾರ್ಥಿಗಳು ನಿಮ್ಮತನವನ್ನು ನೀವು ಸಾಬೀತುಪಡಿಸಿಕೊಳ್ಳಬೇಕು. ನಿಮ್ಮ ಬದುಕು, ಭವಿಷ್ಯದ ಬಗ್ಗೆ ಗಂಭೀರತೆ ಇಲ್ಲದಿದ್ದರೆ ಯಾರೂ ನಿಮಗೆ ಸಹಾಯ ಮಾಡಲಾರರು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ಎಚ್ಚರಿಸಿದರು.ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್. ಹುಲಿನಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಪುಸ್ತಕಗಳಿಗೆ ಜೀವನ ಪರಿವರ್ತನೆ ಮಾಡುವ ದಿವ್ಯಶಕ್ತಿ ಇರುತ್ತದೆ. ಮಕ್ಕಳು ಸಾಧಕರ ಸಾಧನೆಗಳ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆಯಬೇಕು. ಜ್ಞಾನದ ಕೊರತೆಯೂ ನಮ್ಮ ವೈಫಲ್ಯತೆಗೆ ಕಾರಣ. ಜ್ಞಾನ, ತಿಳುವಳಿಕೆಗಾಗಿ ಉತ್ತಮ ಪುಸ್ತಕಗಳನ್ನೂ ಓದುವಂತೆ ಸಲಹೆ ಮಾಡಿದರು.
ಸಿಎಸ್‌ಐಆರ್ ಸಂಸ್ಥೆಯ ಐಸಿಎಎಸ್‌ಟಿ ಮುಖ್ಯಸ್ಥ ಡಾ.ಬಿ.ಎಸ್. ಶಿವರಾಮ್ ಅವರು ಮುಖ್ಯ ಭಾಷಣಾಕಾರರಾಗಿ, ಗ್ರಂಥಾಲಯ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಗ್ರಂಥಾಲಯ ಸೇವಾ ಚಟುವಟಿಕೆ, ಗ್ರಂಥಾಲಯ ವ್ಯವಸ್ಥೆ ನಡೆದುಬಂದ ಹಾದಿ, ಗ್ರಂಥಾಲಯದ ಮಹತ್ವ, ಪುಸ್ತಕ ಓದುವ ಹವ್ಯಾಸದ ಪ್ರಯೋಜನಗಳ ಬಗ್ಗೆ ವಿವರವಾಗಿ ಹೇಳಿದರು. ಹಿರಿಯ ಗ್ರಂಥಪಾಲಕರಾದ ಡಾ.ಬಿ.ಎಸ್. ಶಿವರಾಮ್, ಡಾ. ಈಶ್ವರಪ್ಪ ಬೆಂಡಿ, ಡಾ. ಪರಮಾನಂದ, ಡಾ. ಅನಿತಾ ರಾಯ್, ರಂಗನಾಥ್, ಜಿ.ಹೆಚ್. ಮೋಹನ್‌ಕುಮಾರ್ ಅವರಿಗೆ ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ ನೀಡಿ ವಿತರಿಸಿ ಗೌರವಿಸಲಾಯಿತು.ರೋಟರಿ ತುಮಕೂರು ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಾಗರಾಜ್, ಕಾರ್ಯದರ್ಶಿ ಎಸ್. ಚಂದ್ರಕಲಾ, ಶ್ರೀದೇವಿ ಸಂಸ್ಥೆಯ ಎಂ.ಎಸ್. ಪಾಟೀಲ್, ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ನರೇಂದ್ರ ವಿಶ್ವನಾಥ್, ರೋಟರಿ ಅಸಿಸ್ಟೆಂಟ್ ಗೌರ್ನರ್ ಸಿ. ನಾಗರಾಜ್, ಶ್ರೀದೇವಿ ಸಂಸ್ಥೆಯ ಗ್ರಂಥಪಾಲಕರು ಭಾಗವಹಿಸಿದ್ದರು.