ಕನ್ನಡಪ್ರಭ ವಾರ್ತೆ ನಾಗಮಂಗಲ
ಗಣೇಶನಿಗೆ ಮೊದಲ ಪೂಜೆ ಎಂಬುದು ಹಿಂದೂ ಧಾರ್ಮಿಕ ಪದ್ಧತಿ. ಕೆಲ ದುಷ್ಕರ್ಮಿಗಳು ಗಣಪತಿ ವಿಸರ್ಜನೆ ವೇಳೆ ಅಪಮಾನ ಮಾಡುತ್ತಾರೆ ಎಂದರೆ ಇದಕ್ಕೆ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನ ಪ್ರತಿಫಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.ಪಟ್ಟಣದ ಗರಡಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯ ಮತ್ತು ಕೆಲ ದಿನಗಳ ಹಿಂದೆ ಪಟ್ಟಣದಲ್ಲಿ ಸಂಭವಿಸಿದ್ದ ಗಲಭೆಯಿಂದ ಹಾನಿಗೊಳಗಾದ ಸಂತ್ರಸ್ತರ ಮನೆಗಳಿಗೆ ಭೇಟಿ ಕೊಟ್ಟ ಬಳಿಕ ಮಾತನಾಡಿದರು.
ಗಣಪತಿ ಮೆರವಣಿಗೆಗೆ ಕೆಲ ಕಿಡಿಗೇಡಿಗಳು ತೊಂದರೆ ಕೊಡುತ್ತಾರೆಂದರೆ ನಾವು ಯಾವ ದೇಶದಲ್ಲಿದ್ದೇವೆ ಎಂಬುದೇ ಅರ್ಥ ಆಗುತ್ತಿಲ್ಲ. ಗಣಪತಿಯನ್ನು ಪೂಜಿಸುತ್ತಿರುವ ಹಿಂದೂಗಳು ತಾಳ್ಮೆಯಿಂದ ಇರುವ ಪ್ರತಿಫಲವೇ ನಮ್ಮ ಮೇಲೆ ದಬ್ಬಾಳಿಕೆ ದೌರ್ಜನ್ಯ ಹಿಂಸೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ಮುಸ್ಲಿಂರಿಗೆ ಕುಮ್ಮಕ್ಕು ಕೊಟ್ಟಿದ್ದರಿಂದ ಗಲಭೆಯಾಗಿದೆ. ಕಾಂಗ್ರೆಸ್ ಸರ್ಕಾರ ಇರೋವರೆಗೂ ಹಿಂದೂಗಳಿಗೆ ತೊಂದರೆ ತಪ್ಪಿದ್ದಲ್ಲ. ಮತಾಂಧರು, ದೇಶದ್ರೋಹಿಗಳು ಗಣೇಶನಿಗೆ ಅವಮಾನ ಮಾಡಿದ್ದಾರೆ. ಇವರಿಗೆ ಪೆಟ್ರೋಲ್ ಬಾಂಬ್, ಕಲ್ಲುಗಳು ಎಲ್ಲಿಂದ ಬಂತೂ. ಎಲ್ಲವೂ ಪ್ಲಾನ್ ಮಾಡಿ ಗಲಭೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಕಿರಣ್ ಎಂಬಾತನ ಬಲಿಯಾಗಿದೆ. ಅಂಗಡಿಗಳನ್ನು ಸುಟ್ಟಿ ಹಾಕಿದ್ದಾರೆ. ಮನೆಗಳಿಗೆ ಕಲ್ಲು ತೂರಿದ್ದಾರೆ. ಅವರೆಲ್ಲರಿಗೂ ಸಮಾಧಾನ ಹೇಳಲು ಬಂದಿದ್ದೇನೆ. ಈ ಹಿಂದೆಯೇ ಪಟ್ಟಣಕ್ಕೆ ಬರಲು ಮುಂದಾದಾಗ ಪೊಲೀಸರು ತಡೆದಿದ್ದರು. ಕಾಂಗ್ರೆಸ್ ಸರ್ಕಾರ ಇರೋವರೆಗೂ ಹಿಂದೂಗಳಿಗೆ ತೊಂದರೆ ತಪ್ಪಿದ್ದಲ್ಲ ಎಂದು ಕಿಡಿಕಾರಿದರು.ಪರಿಹಾರದಲ್ಲಿ ತಾರತಮ್ಯ:
ಗಲಭೆಯಲ್ಲಿ ಬೆಂಕಿಗೆ ಆಹುತಿಯಾದ ಬಟ್ಟೆ ಅಂಗಡಿಯ ಹಿಂದೂ ಮಾಲೀಕರಿಗೆ 12 ಲಕ್ಷ , ಮುಸ್ಲಿಂ ಸಮುದಾಯದ ಕಟ್ಟಡದ ಮಾಲೀಕನಿಗೆ 28 ಲಕ್ಷ ರು. ಪರಿಹಾರ ನೀಡಲಾಗಿದೆ. ಇಷ್ಟು ದೊಡ್ಡ ಪರಿಹಾರ ನೀಡಲು ಯಾವ ಮಾನದಂಡ ಬಳಸಿದೆ. ಇದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣಕ್ಕೆ ಉದಾಹರಣೆ ಎಂದು ದೂರಿದರು.ಮುಸ್ಲಿಂ ಸಮುದಾಯ ಇನ್ನು ಮುಂದೆ ಸೌಹಾರ್ದತೆಯಿಂದ ಬದುಕಬೇಕು. ಶಾಂತಿ ಕದಡುವ ಆಕ್ರಮಿಸಿಕೊಳ್ಳುವ ಮನೋಭಾವ ಬಿಡಬೇಕು. ಹಿಂದೂಗಳು ಜಾಗೃತರಾಗಿದ್ದಾರೆ. ನೆಮ್ಮದಿಯಿಂದ ಬದುಕುವ ಹಾದಿ ಹಿಡಿಯಿರಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಬದರಿಕೊಪ್ಪಲಿನ ಮೃತ ಕಿರಣ್ ಮನೆ ಹಾಗೂ ಗಲಭೆಯಲ್ಲಿ ಬೆಂಕಿಗೆ ಆಹುತಿಯಾದ ಬಟ್ಟೆ ಅಂಗಡಿ ಮಾಲೀಕ ಭೀಮನ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದರು. ಈ ವೇಳೆ ಬಜರಂಗದಳದ ತಾಲೂಕು ಕಾರ್ಯದರ್ಶಿ ಮಹೇಶ್, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪುಣ್ಯಕೋಟಿ ರಾಘವೇಂದ್ರ, ಜಿಲ್ಲಾ ಸಂಯೋಜಕ ಶಶಿಕಿರಣ್, ತಾಲೂಕು ಸಂಯೋಜಕ್ ಕಾರ್ತಿಕ್, ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಹಲವರಿದ್ದರು.