ಸೋಮರಡ್ಡಿ ಅಳವಂಡಿ
ಹೀಗೆ, ವೆಬ್‌ನಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ವೈಭವ ನೋಡಿದ್ದ ಇಸ್ರೇಲ್ ದಂಪತಿ ಹಂಪಿಗೆ ಬಂದವರು ಈ ಬಾರಿ ಕೊಪ್ಪಳಕ್ಕೆ ಆಗಮಿಸಿ, ಗವಿಸಿದ್ಧೇಶ್ವರ ಜಾತ್ರೆಯ ಸೊಬಗನ್ನು ಖುದ್ದು ವೀಕ್ಷಿಸಿದ್ದಾರೆ. ಅಲ್ಲದೆ, ಜಾತ್ರೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹೀಲಾ ಮತ್ತು ನೋಯಿಂ ಎನ್ನುವ ಇಸ್ರೆಲ್ ದಂಪತಿ ಗುರುವಾರ ಗವಿಸಿದ್ಧೇಶ್ವರ ರಥದ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಜಾತ್ರೆಯಲ್ಲಿ ಸುತ್ತಾಡಿ ಸಂತಸಪಟ್ಟರು. ಆನಂತರ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಯ ದರ್ಶನ ಪಡೆದಿದ್ದಾರೆ. ಅದಾದ ನಂತರ ದಾಸೋಹದಲ್ಲಿ ಸುತ್ತಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.ನಮ್ಮ ಜೀವನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಅಡುಗೆ ಮಾಡುವುದನ್ನು ನೋಡಿಯೇ ಇಲ್ಲ. ನಮ್ಮಲ್ಲಿ ಎಲ್ಲಿಯೂ ಇಂಥ ವೈಭವ ಇರುವುದಿಲ್ಲ. ನಮ್ಮ ಆಚರಣೆಗಳೆಲ್ಲ ಹೋಟೆಲ್‌ಗಳಿಗೆ ಸೀಮಿತ. ಸಾವಿರಾರು ಸಂಖ್ಯೆಯಲ್ಲಿ ಸೇರುವುದೇ ಅಪರೂಪ. ಆದರೆ, ಇಲ್ಲಿ ಲಕ್ಷಾಂತರ ಭಕ್ತರು ಸೇರುವುದು ಮತ್ತು ಅವರಿಗೆ ಪ್ರಸಾದ ವ್ಯವಸ್ಥೆ ಮಾಡುವುದನ್ನು ವೆಬ್‌ಸೈಟ್‌ನಲ್ಲಿ ನೋಡಿದ್ದ ನಮಗೆ ನಂಬಲು ಆಗಿರಲಿಲ್ಲ. ಹೀಗಾಗಿ, ಹಂಪಿಗೆ ಬಂದಿದ್ದ ನಾವು ನೋಡಿಯೇ ಬರಬೇಕು ಎಂದು ಬಂದೆವು. ಇಲ್ಲಿಗೆ ಬಂದ ಮೇಲೆ ಬೆರಗಾಗುವಂತೆ ಆಯಿತು ಎಂದು ಹೇಳಿದರು.
ಅನೇಕ ವಿದೇಶಿಗರು: ಕೇವಲ ಇಸ್ರೇಲ್ ದಂಪತಿ ಅಷ್ಟೇ ಅಲ್ಲ, ಹಂಪಿ ಮತ್ತು ಆನೆಗೊಂದಿಗೆ ಭಾಗಕ್ಕೆ ಬರುವ ಅನೇಕ ವಿದೇಶಿ ಪ್ರವಾಸಿಗರು ಈಗ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ಬರುತ್ತಿದ್ದಾರೆ. ಕಳೆದ ವರ್ಷವೂ ಹಲವು ವಿದೇಶಿಗರು ಭೇಟಿ ನೀಡಿದ್ದರು. ಹೀಗಾಗಿ, ಈಗ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಜಾತ್ರೆ ವಿಶ್ವವ್ಯಾಪಿಯಾಗುತ್ತಿದೆ.ಕೋಟಿ ದಾಟಿದ ವೀಕ್ಷಕರು: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವನ್ನು ವೆಬ್‌ಸೈಟ್‌ನಲ್ಲಿ ಕೋಟಿಗೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಗವಿಸಿದ್ಧೇಶ್ವರ ಮಹಾಸ್ವಾಮಿ ಮಠದ ಅಧಿಕೃತ ವೆಬ್‌ಸೈಟ್ ಹಾಗೂ ನೂರಾರು ಯು ಟ್ಯೂಬ್ ಚಾನಲ್, ಮುಖ್ಯವಾಹಿನಿಗಳು ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ವೆಬ್‌ಸೈಟ್‌ಗಳಲ್ಲಿ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ದೃಶ್ಯ ಪ್ರಸಾರವಾಗಿದೆ.
ಪ್ರಾಣೇಶ ಹಾಸ್ಯಕ್ಕೆ ಬಿದ್ದು ಬಿಕ್ಕು ನಕ್ಕರು: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ಗಂಗಾವತಿಯ ಪ್ರಾಣೇಶ ಅವರ ಹಾಸ್ಯಕ್ಕೆ ನೆರೆದಿದ್ದ ಸಹಸ್ರಾರು ಜನರು ಬಿದ್ದು ಬಿದ್ದು ನಕ್ಕರು.ತಿಳಿ ಹಾಸ್ಯದೊಂದಿಗೆ ಪ್ರಾರಂಭಿಸಿದ ಪ್ರಾಣೇಶ ಅವರು, ಸತತ 13 ವರ್ಷಗಳಿಂದ ತಮ್ಮೆಲ್ಲರಿಗೂ ಹಾಸ್ಯ ಕಾರ್ಯಕ್ರಮ ನೀಡುತ್ತಿದ್ದೇನೆ. ಆದರೂ ನಿಮಗೆ ಯಾರಿಗೂ ಬೇಜಾರಾಗಿಲ್ಲ. ನನಗೆ ಬೇಜಾರ ಆಗುವಂತಾಗಿದೆಯಾದರೂ ನೀವೆಲ್ಲ ನಗುವುದನ್ನು ನೋಡಿ ಮತ್ತೆ ಮತ್ತೆ ಬರುತ್ತಿದ್ದೇನೆ ಎಂದರು.
ನಾನು ಹತ್ತಾರು ದೇಶಗಳನ್ನು ಸುತ್ತಾಡಿದ್ದೇನೆ, ಇಲ್ಲಿಯಷ್ಟು ಭಕ್ತರು ಸೇರುವುದನ್ನು ನಾನು ಎಲ್ಲಿಯೂ ನೋಡಿಲ್ಲ ಮತ್ತು ಇಲ್ಲಿಯ ಭಕ್ತರು ನಕ್ಕಂತೆ ಎಲ್ಲಿಯೂ ನಗುವುದನ್ನು ನೋಡಿಲ್ಲ. ತಾವೆಲ್ಲ ಮನತುಂಬಿ ನಕ್ಕರೆ ಹಾಸ್ಯ ಕಲಾವಿದನಿಗೆ ಅದುವೇ ಸಂತೋಷ ಎಂದರು.ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ನನಗೆ ಪ್ರತಿವರ್ಷ ಅವಕಾಶ ನೀಡುತ್ತಾರೆ. ಅವರ ಆಶೀರ್ವಾದದಿಂದ ಹದಿಮೂರು ವರ್ಷಗಳಿಂದ ಬರುತ್ತಿದ್ದೇನೆ ಎಂದರು.