ಕನ್ನಡಪ್ರಭ ವಾರ್ತೆ ಸಿರಿಗೆರೆ
ಜನತೆಯಿಂದ ಮತ ಪಡೆದು ಗೆದ್ದ ನಂತರ ಶಾಸಕನಾದವನು ಇಡೀ ಕ್ಷೇತ್ರವನ್ನೇ ತನ್ನ ಕುಟುಂಬವೆಂಬಂತೆ ತಿಳಿದು ಕರ್ತವ್ಯ ನಿರ್ವಹಿಸಬೇಕು. ಆಗ ಜನರ ಮನದಲ್ಲಿ ಉಳಿಯಲು ಸಾಧ್ಯ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಸಮೀಪದ ಸಿದ್ದಾಪುರ ಗ್ರಾಮದಲ್ಲಿ 4 ಕೋಟಿ ರು. ವೆಚ್ಚದ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನತೆಯ ಹಿತವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಹಳ್ಳಿಯ ಜನರ ಮನೋಭಿಲಾಷೆಯನ್ನು ಅರಿತು ನಿತ್ಯವೂ ಒಂದೊಂದು ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದೇನೆ. ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು.ಜನರಿಗೆ ಅನುಕೂಲವಾಗುವಂತೆ ರಸ್ತೆ, ಶಾಲೆ ಕಾಲೇಜುಗಳು, ನೀರು, ವಿದ್ಯುತ್ ಸೌಲಭ್ಯಗಳನ್ನು ಒದಗಿಸುವತ್ತ ನಾನು ಕೆಲಸ ಮಾಡುತ್ತಿದ್ದೇನೆ. ಸಿದ್ಧಾಪುರ ಗ್ರಾಮದ ಜನರು ನನ್ನನ್ನು ಹಿಂದಿನಿಂದಲೂ ಬೆಂಬಲಿಸುತ್ತ ಬಂದಿದ್ದಾರೆ. ಈಗ ಅವರ ಗ್ರಾಮದಲ್ಲಿ ಸುಮಾರು 4 ಕೋಟಿ ರು. ಯೋಜನೆಗೆ ಚಾಲನೆ ನೀಡುತ್ತಿದ್ದೇನೆ ಎಂದರು.
ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ 5 ಕೋಟಿ ರು. ಯೋಜನೆಯ ಕೆಲಸ ನಡೆಯುತ್ತಿದೆ. ಸಿರಿಗೆರೆ ಮತ್ತು ಮುತ್ತುಗದೂರು ಸಿಸಿ ರಸ್ತೆಯ ಕೆಲಸ ನಡೆಯುತ್ತಿರುವುದನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ. ಭರಮಸಾಗರ ಸಮೀಪದ ಅಡವಿಗೊಲ್ಲರಹಳ್ಳಿಯಲ್ಲಿ 250 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾದ ವಿದ್ಯುತ್ ಕೇಂದ್ರ ಆಗುತ್ತಿದೆ. ಇನ್ನು 6 ತಿಂಗಳಲ್ಲಿ ಅದು ಪೂರ್ಣ ಮುಗಿಯುವ ಭರವಸೆ ಇದ್ದು ಈ ಭಾಗದ ವಿದ್ಯುತ್ ತೊಂದರೆಯನ್ನು ಅದು ನೀಗಲಿದೆ ಎಂದರು.ಇಷ್ಟಲ್ಲದೆ ವಾಣಿವಿಲಾಸ ಸಾಗರದಿಂದ ಹೊಳಲ್ಕೆರೆ ಕ್ಷೇತ್ರದ ಹಲವು ಭಾಗಗಳಿಗೆ ಕುಡಿಯುವ ನೀರು ತರುವ ಇಚ್ಛೆಯೂ ನನ್ನದಾಗಿದ್ದು ಅದಕ್ಕಾಗಿ 68 ಕೋಟಿ ರು. ಯೋಜನೆ ಸಿದ್ಧವಾಗಿದೆ. ಇವೆಲ್ಲವೂ ಸಕಾಲದಲ್ಲಿ ಆದರೆ ಇಡೀ ಕ್ಷೇತ್ರ ಸಮೃದ್ಧವಾಗುತ್ತದೆ ಎಂದರು.
ಊರಿನ ಕೆರೆ ತುಂಬಿಸಿ: ನಮ್ಮ ಊರಿನ ಗೋಕಟ್ಟೆಯ ಸಮೀಪವೇ ಸಾಸ್ವೆಹಳ್ಳಿ ಯೋಜನೆಯ ಪೈಪ್‌ಲೈನ್ ಭೀಮಸಮುದ್ರ ಕೆರೆಯವರೆಗೆ ಹೋಗಿದೆ. ಅದರೆ ಅಲ್ಲಿಂದ ಗ್ರಾಮದ ಗೋಕಟ್ಟೆ ನೀರು ಹರಿಸಿಕೊಟ್ಟರೆ, ರೈತರಿಗೆ ಅನುಕೂಲವಾಗಲಿದೆ. ಕೆರೆಗಳ ಸಂಪರ್ಕವೇ ಇಲ್ಲದಿರುವ ಈ ಗ್ರಾಮದ ಕಟ್ಟೆ ತುಂಬಿಸಿದರೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಎಂದು ಗ್ರಾಮಸ್ಥರು ಬೇಡಿಕೆ ಇಟ್ಟರು. ಇದರ ಸಾಧ್ಯ ಸಾಧ್ಯತೆಗಳ ಬಗ್ಗೆ ಯೋಚಿಸಿ ಅನುಕೂಲ ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಯುವ ಮೋರ್ಚಾ ಕಾರ್ಯದರ್ಶಿ ಕೆ.ಬಿ ಮೋಹನ್ ಮಾತನಾಡಿ, ರಾಜ್ಯದಲ್ಲಿಯೇ ಹೊಳಲ್ಕೆರೆ ಕ್ಷೇತ್ರದಲ್ಲಿ ನಡೆಯುತ್ತಿರುವಷ್ಟು ಕಾಮಗಾರಿಗಳು ಬೇರೆಡೆ ನಡೆಯುತ್ತಿಲ್ಲ. ನಮ್ಮ ಶಾಸಕರು ಅಷ್ಟೊಂದು ಕಾರ್ಯತತ್ಪರರಾಗಿ ಕ್ಷೇತ್ರದ ಜನರಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ವೀರಭದ್ರಯ್ಯ ಅವರು ಗ್ರಾಮದ ಪ್ರಮುಖ ಸಮಸ್ಯೆಗಳನ್ನು ಶಾಸಕರಿಗೆ ನಿವೇದಿಸಿಕೊಂಡರು. ಗ್ರಾಪಂ ಅಧ್ಯಕ್ಷೆ ರೂಪಾ ಪ್ರದೀಪ್, ಸದಸ್ಯ ಬಸವರಾಜಪ್ಪ, ಪ್ರಕಾಶ್, ಬಸವರಾಜಯ್ಯ, ಎಸ್.ಎಂ. ಸದಾನಂದ್, ಸಿರಿಗೆರೆ ಪಂಚಾಕ್ಷರಯ್ಯ ಪೆಟ್ರೋಲ್ ಬಸವರಾಜ್ ಭಾಗವಹಿಸಿದ್ದರು. ವಿಘ್ನೇಶ್ವರ ಸ್ಟುಡಿಯೋ ಮಾಲೀಕ ಎಸ್. ಚಿದಾನಂದ ಸ್ವಾಗತಿಸಿದರು.