ವ್ಯಾಪಾರಿ ಮಳಿಗೆಯಾದ ಹಳೇ ಬಸ್‌ ನಿಲ್ದಾಣ

KannadaprabhaNewsNetwork | Published : Oct 23, 2023 12:16 AM

ಸಾರಾಂಶ

ಗ್ರಾಮೀಣ ಬಸ್ ನಿಲ್ದಾಣವೆಂದೇ ಹೆಸರು ವಾಸಿಯಾದ ಶಿಗ್ಗಾಂವಿ ಹಳೇ ಬಸ್ ನಿಲ್ದಾಣ ಇದೀಗ ವಸತಿ ಕೇಂದ್ರ, ವ್ಯಾಪಾರಿ ಮಳಿಗೆಯಾಗಿ ಬದಲಾಗುತ್ತಿದೆ!ಸುಮಾರು ₹೩.೫ ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದುವರೆಗೂ ಬಸ್ ನಿಲ್ದಾಣದ ಒಳಗೆ ಒಂದೂ ಬಸ್ ಬಂದಿಲ್ಲ, ಹೋಗಿಲ್ಲ. ಇದು ಅಚ್ಚರಿಯಾದರೂ ಸತ್ಯ!

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಗ್ರಾಮೀಣ ಬಸ್ ನಿಲ್ದಾಣವೆಂದೇ ಹೆಸರು ವಾಸಿಯಾದ ಶಿಗ್ಗಾಂವಿ ಹಳೇ ಬಸ್ ನಿಲ್ದಾಣ ಇದೀಗ ವಸತಿ ಕೇಂದ್ರ, ವ್ಯಾಪಾರಿ ಮಳಿಗೆಯಾಗಿ ಬದಲಾಗುತ್ತಿದೆ!

ಸುಮಾರು ₹೩.೫ ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ. ಆದರೆ ಇದುವರೆಗೂ ಬಸ್ ನಿಲ್ದಾಣದ ಒಳಗೆ ಒಂದೂ ಬಸ್ ಬಂದಿಲ್ಲ, ಹೋಗಿಲ್ಲ. ಇದು ಅಚ್ಚರಿಯಾದರೂ ಸತ್ಯ!

ಮೊದಲಿದ್ದ ಹಳೇ ಬಸ್ ನಿಲ್ದಾಣದ ಕಟ್ಟಡ ತೆರವುಗೊಳಿಸಿ ₹೩.೫ ಕೋಟಿ ವೆಚ್ಚದಲ್ಲಿ ವಾಣಿಜ್ಯ ಮಳಿಗೆಗಳೊಂದಿಗೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಶಾಸಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಉದ್ಘಾಟನೆ ನೆರವೇರಿಸಲಾಗಿದೆ. ಹಲವು ತಿಂಗಳುಗಳೇ ಕಳೆದರೂ ಬಸ್ ನಿಲ್ದಾಣದ ಒಳಗೆ ಒಂದೂ ಬಸ್ ಓಡಾಡಿಲ್ಲ.

ಪ್ರತಿದಿನ ಸವಣೂರು, ಹುಲಗೂರು, ತಡಸ, ಕುಂದಗೋಳ, ಹಾನಗಲ್ಲ ಸೇರಿದಂತೆ ಹತ್ತಾರು ಹಳ್ಳಿಗಳ ಸಾವಿರಾರು ಜನ ತಮ್ಮ ನಿತ್ಯ ಕೆಲಸ ಕಾರ್ಯಗಳಿಗೆ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ, ಬಸ್‌ಗಳು ನೂತನವಾಗಿ ಅಭಿವೃದ್ಧಿ ಪಡಿಸಿದ ಹಳೇ ಬಸ್ ನಿಲ್ದಾಣದ ಒಳಗೆ ಬಾರದೇ ದೂರದ ಬೈಪಾಸ್ ಮಾರ್ಗಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹೊಸ ಬಸ್ ನಿಲ್ದಾಣದ ಮೂಲಕ ಸಂಚರಿಸುತ್ತಿವೆ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಬಂದ ಜನರು ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಬಸ್ ಹತ್ತಲು ಹೊಸ ಬಸ್ ನಿಲ್ದಾಣದತ್ತ ಹೋಗಬೇಕಾಗಿದ್ದರಿಂದ ಪ್ರಯಾಣಿಕರು ಖಾಸಗಿ ವಾಹನಗಳನ್ನೇ ಹೆಚ್ಚು ಅವಲಂಬಿಸುವಂತಾಗಿದೆ.

ಖಾಸಗಿ ವಾಹನಗಳ ನಿಲುಗಡೆ:

ಹಳೇ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ ಎನ್ನುವ ನಾಮಫಲಕವಿದೆ. ಆದರೆ, ಯಾವುದೇ ಭಯವಿಲ್ಲದೆ ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳನ್ನು ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡಲಾಗುತ್ತಿದೆ. ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ನಿರ್ವಾಹಕ ಅಧಿಕಾರಿಗೆ ಪ್ರತಿದಿನವೂ ನಿಂತಿರುವ ಖಾಸಗಿ ವಾಹನಗಳನ್ನು ತೆರವುಗೊಳಿಸುವುದೇ ನಿತ್ಯದ ಕಾಯಕವಾಗಿದೆ.

ಮುಚ್ಚಿದ ಶೌಚಾಲಯ:

ಹಳೇ ಬಸ್ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಶೌಚಾಲಯಗಳ ಬಾಗಿಲು ಮುಚ್ಚಲಾಗಿದೆ. ಇದರಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ದುರ್ವಾಸನೆ ಉಂಟಾಗಿದೆ.

ಗ್ರಾಮೀಣ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸದ್ಯ ಹೊಸ ಬಸ್ ನಿಲ್ದಾಣದ ಮೂಲಕ ಹಳ್ಳಿಗಳಿಗೆ ಹೊರಡುವ ಬಸ್‌ಗಳನ್ನು ಹಳೇ ಬಸ್ ನಿಲ್ದಾಣದ ಮೂಲಕ ಓಡಿಸಬೇಕು. ಹಳೇ ಬಸ್ ನಿಲ್ದಾಣಕ್ಕೆ ಸೂಕ್ತ ಸೌಲಭ್ಯವನ್ನು ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಟ್ಟಣದಿಂದ ಹಳ್ಳಿಗಳಿಗೆ ಹೋಗುವ ಎಲ್ಲ ಬಸ್‌ಗಳಿಗೂ ಹಳೇ ಬಸ್ ನಿಲ್ದಾಣ ಒಳ ಪ್ರವೇಶಿಸಲು ತಿಳಿಸಲಾಗಿದೆ. ನಿರ್ವಾಹಕರ ಟ್ರಿಪ್ ಶೀಟ್‌ನಲ್ಲಿ ಕಡ್ಡಾಯವಾಗಿ ನಿಲ್ದಾಣದ ಒಳ ಪ್ರವೇಶಿಸಲು ಬರೆದು ಕಳುಹಿಸಲಾಗುತ್ತಿದೆ. ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸಲು ಒಬ್ಬ ನಿರ್ವಹಣಾ ಅಧಿಕಾರಿ ನೇಮಿಸಲಾಗಿದೆ ಎನ್ನುತ್ತಾರೆ

ಉಪವಿಭಾಗೀಯ ನಿಲ್ದಾಣ ಅಧಿಕಾರಿ ಕೆ. ಶೇಖರನಾಯಕ ಸವಣೂರು.

ಗ್ರಾಮೀಣ ಜನರ ಹಿತದೃಷ್ಟಿಯಿಂದ ಕೋಟ್ಯಂತರ ರು. ಅನುದಾನದೊಂದಿಗೆ ಈ ಬಸ್ ನಿಲ್ದಾಣವನ್ನು ನವೀಕರಿಸಲಾಗಿದೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಹೊಸ ಬಸ್ ನಿಲ್ದಾಣದಿಂದ ಹೊರಡುವ ಎಲ್ಲ ಬಸ್‌ಗಳಿಗೂ ಹಳೇ ಬಸ್ ನಿಲ್ದಾಣ ಒಳಪ್ರವೇಶಿಸಿ ಹೋಗಲು ಕಡ್ಡಾಯವಾಗಿ ಸೂಚನೆ ನೀಡಬೇಕು ಎನ್ನುತ್ತಾರೆ ವಾಕರಸಾ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಶಿವಾನಂದ ಮ್ಯಾಗೇರಿ.

Share this article