ಆನವಟ್ಟಿ: ಸೊರಬ ತಾಲೂಕಿನ ನೇರಲಗಿ ಗ್ರಾಮದ ತರಕಾರಿ ವ್ಯಾಪಾರಿ ಪಿ.ಟಿ.ಸಂಜೀವ ಅವರು ತಾವು ಕಲಿತ ಸರ್ಕಾರಿ ಶಾಲೆಗೆ ಅಂದಾಜು 2.10 ಲಕ್ಷ ರು. ವೆಚ್ಚದಲ್ಲಿ ಸುಂದರವಾದ ಧ್ವಜಸ್ತಂಭ ನಿರ್ಮಿಸಿಕೊಟ್ಟಿದ್ದಾರೆ.
ಧ್ವಜಸ್ತಂಭದ ವಿಶೇಷತೆ: ವಿಶಾಲವಾದ ವೃತ್ತಾಕಾರದಲ್ಲಿ ಧ್ವಜಸ್ತಂಭ ನಿರ್ಮಾಣ. ಮಧ್ಯದಲ್ಲಿ 24 ಅಡಿ ಉದ್ದದ ಸ್ಟೀಲ್ ಧ್ವಜಕಂಬ. ಧ್ವಜರೋಹಣ ಮಾಡುವ ಗಣ್ಯವ್ಯಕ್ತಿ ಹಾಗೂ ದೈಹಿಕ ಶಿಕ್ಷಕ ನಿಂತುಕೊಳ್ಳಲು ಇಂಟರ್ ಲಾಕ್ ಸಿಮೆಂಟ್ ಇಟ್ಟಿಗೆ ಬಳಕೆ. ಅದರ ಸುತ್ತಲು ಗ್ರ್ಯಾನೈಟ್ ಬಳಸಲಾಗಿದೆ.
ನಂತರ ಹಸಿರು ಹುಲ್ಲಿನ ಹಾಸು. 3 ಅಡಿ ಎತ್ತರದ ಸ್ಟೀಲ್ ಕಂಬಗಳು ಹಾಗೂ ಕಂಬಗಳಿಂದ, ಕಂಬಗಳಿಗೆ ಸ್ಟೀಲ್ ಚೈನ್ ಹಾಕಿದ್ದು, ಆ ಕಂಬಗಳ ಮೇಲೆ ಸ್ಟೀಲ್ ಪಟ್ಟಿಯಲ್ಲಿ ಶಾಲೆಯ ಹೆಸರನ್ನು ಬರಸಲಾಗಿದೆ. ಮಳೆಗಾಲದಲ್ಲಿ ಧ್ವಜಸ್ತಂಭ ಹಾಳಾಗದಂತೆ ಹೊರಕಟ್ಟೆಯ ಸುತ್ತಲು ಗ್ರ್ಯಾನೈಟ್ ಕಲ್ಲುಗಳನ್ನು ಬಳಸಿ, ನೋಡುಗರಿಗೆ ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆ.ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ: ಜ.25 ರಂದು ಈ ವಿನೂತನ ಧ್ವಜಸ್ತಂಭದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ನೆರವೇರಿಸುವರು.
ಶಾಲೆಯ ಹಳೆ ವಿದ್ಯಾರ್ಥಿ ಸಂಜೀವ ಅವರು ಧ್ವಜಸ್ತಂಭ ನಿರ್ಮಿಸಿರುವುದು ಉತ್ತಮ ಕಾರ್ಯ. ಇಂತಹ ಒಳ್ಳೆಯ ಕೆಲಸಗಳು ಇತರರಿಗೂ ಮಾದರಿಯಾಗಲಿ- ಎಚ್ ಗೀತಾದೇವಿ, ಮುಖ್ಯ ಶಿಕ್ಷಕಿ
ಈಚೆಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರವೊಂದರಲ್ಲಿ ನನ್ನ ಶಾಲೆ, ನನ್ನ ಜವಾಬ್ದಾರಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿದರು. ಅದರಿಂದ ಪ್ರೇರಣೆಗೊಂಡು, ಮಕ್ಕಳಿಗೂ ಅನುಕೂಲವಾಗುವ ದೃಷ್ಟಿಯಿಂದ ಧ್ವಜಸ್ತಂಭ ಕಟ್ಟಿಸಿದ್ದೇನೆ- ಪಿ.ಟಿ.ಸಂಜೀವ ತರಕಾರಿ, ಹಳೆ ವಿದ್ಯಾರ್ಥಿ