ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದ ಸುಭಾಷ್ ಮೈದಾನದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಜೆಎಸ್ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು, ಕೌಡಳ್ಳಿ ವತಿಯಿಂದ ಆಯೋಜಿಸಿದ್ದ 2026–27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವುದೇ ಕಷ್ಟವಾಗಿತ್ತು. ಆದರೆ ಇಂದು ಭಾರತೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಶ್ರಮ ಮತ್ತು ನಿರಂತರ ಪ್ರಯತ್ನವಿದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ ಎಂದರು.
ಕ್ರೀಡೆ ಆರೋಗ್ಯದ ಮೂಲವಾಗಿದ್ದು, ಪ್ರತಿಯೊಬ್ಬರೂ ದೈನಂದಿನ ಜೀವನದಲ್ಲಿ ಕ್ರೀಡೆಗೆ ಆದ್ಯತೆ ನೀಡಬೇಕು. ಹಿಂದೆ ಮಕ್ಕಳಿಗೆ ಆಟವಾಡಲು ಸಾಕಷ್ಟು ಖಾಲಿ ಜಾಗ ಹಾಗೂ ಮೈದಾನಗಳು ಲಭ್ಯವಿದ್ದವು. ಆದರೆ ಭೂಮಿಯ ಬೆಲೆ ಹೆಚ್ಚಳದಿಂದಾಗಿ ಖಾಲಿ ಜಾಗಗಳು ಕಡಿಮೆಯಾಗುತ್ತಿದ್ದು, ಮಕ್ಕಳಿಗೆ ಸುರಕ್ಷಿತವಾಗಿ ಆಟವಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಭಾರತದಲ್ಲಿ ಯುವಜನರ ಪ್ರಮಾಣ ಹೆಚ್ಚಿದ್ದು, ಇದು ದೇಶದ ಬಹುದೊಡ್ಡ ಸಂಪತ್ತು. ಯುವಕರು ಶಿಕ್ಷಣದ ಜತೆಗೆ ಕ್ರೀಡೆ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ದೇಶವನ್ನು ಬಲಿಷ್ಠಗೊಳಿಸಬೇಕು. ಪಡೆದ ಶಿಕ್ಷಣ ಹಾಗೂ ಜ್ಞಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಬಳಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೌಡಳ್ಳಿ ಲೋಹಿತ್, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜಕ ಆರ್. ಮಂಜುನಾಥ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.