ಕನ್ನಡಪ್ರಭ ವಾರ್ತೆ ಮಂಗಳೂರು
ಅಡ್ಯಾರ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪಟ್ಲ ದಶಮ ಸಂಭ್ರಮದಲ್ಲಿ ದುಡಿದವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಬೆಂದೂರ್ ವೆಲ್‌ನಲ್ಲಿರುವ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ಧನ್ಯೋತ್ಸವ ಕಾರ್ಯಕ್ರಮ ನಡೆಯಿತು.ಪಟ್ಲ ದಶಮ ಸಂಭ್ರಮದ ಅಧ್ಯಕ್ಷರಾದ ಬರೋಡಾ ಶಶಿ ಕೇಟರರ್ಸ್ ಮಾಲೀಕ, ಉದ್ಯಮಿ ಶಶಿಧರ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರು. ದೇಣಿಗೆ ಸಂಗ್ರಹಿಸುವ ಸಂಕಲ್ಪ ಮಾಡಲಾಗಿತ್ತು. ದಾನಿಗಳ ಹಿತೈಷಿಗಳ ನೆರವಿನಿಂದ ನಾವು ನಮ್ಮ ಗುರಿಯನ್ನು ಸಾಧಿಸಿ ಮುನ್ನಡೆದಿದ್ದೇವೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈ ಯೋಜನೆ 25 ಕೋಟಿ ರು. ವರೆಗೆ ತಲುಪುವವರೆಗೆ ನಾವು ನಮ್ಮ ಪ್ರಯತ್ನ ಮುಂದುವರಿಸುತ್ತೇವೆ ಎಂದರು. ಟ್ರಸ್ಟ್‌ನ ಗೌರವಾಧ್ಯಕ್ಷ, ಮಹಾದಾನಿ ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಪಟ್ಲ ದಶಮ ಸಂಭ್ರಮದ ಯಶಸ್ಸಿಗೆ ಎಲ್ಲ ಘಟಕಗಳ ಪದಾಧಿಕಾರಿಗಳು ಅಹರ್ನಿಶಿಯಾಗಿ ದುಡಿದಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವ ಧನ್ಯೋತ್ಸವ ಅತ್ಯಂತ ಶ್ಲಾಘನೀಯ ಎಂದರು. ಪಟ್ಲ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಮಾತನಾಡಿ, ಡಾ.ಕನ್ಯಾನ ಸದಾಶಿವ ಶೆಟ್ಟಿ, ಡಾ ಕೆ. ಪ್ರಕಾಶ್ ಶೆಟ್ಟಿ, ಬರೋಡಾ ಶಶಿಧರ ಶೆಟ್ಟಿ, ಕೆ. ಡಿ. ಶೆಟ್ಟಿ, ಶಾರದಾ ಪ್ರಸಾದ್, ಸಿಎ ದಿವಾಕರ ರಾವ್ ಕಟೀಲು ಅವರಂತಹ ಅನೇಕ ದಾನಿಗಳಿಂದ ದಶಮ ಸಂಭ್ರಮ ಯಶಸ್ಸಿಯಾಯಿತು. ನಮ್ಮ ದಾನಿಗಳಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು ಎಂದರು.
ಪದಾಧಿಕಾರಿಗಳಾದ ಡಾ.ಸತೀಶ್ ಭಂಡಾರಿ, ಜಯರಾಮ ಶೇಖ, ಭುಜಬಲಿ ಧರ್ಮಸ್ಥಳ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ರಂಗೋಲಿ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ, ಉದಯ ಕುಮಾರ್ ಶೆಟ್ಟಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಆರತಿ ಆಳ್ವ ಇದ್ದರು.ಈ ಸಂದರ್ಭ ಧ್ರುವ ದ್ಯುಮಣಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು. ಯಕ್ಷ ಶಿಕ್ಣಣದ ರೂಪಾರಿ, ಧ್ರುವ ದ್ಯುಮಣಿ ಕೃತಿಯ ಸಂಪಾದಕ, ಕಲಾವಿದ ದೀವಿತ್ ಕೋಟ್ಯಾನ್ ಪೆರಾಡಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಪ್ರದೀಪ್ ಆಳ್ವ ವಂದಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.