ಕನ್ನಡದ ಅಸ್ಮಿತೆ ರಕ್ಷಣೆಗೆ ರಾಜಿ ರಹಿತ ಹೋರಾಟ

KannadaprabhaNewsNetwork |  
Published : Jan 19, 2026, 02:00 AM IST
ದೊಡ್ಡಬಳ್ಳಾಪುರದಲ್ಲಿ ಭಾನುವಾರ ಯುವ ಕರ್ನಾಟಕ ವೇದಿಕೆ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡಿಗರ ಸಮಗ್ರ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಆಳುವ ಸರ್ಕಾರಗಳು ಮಾಡಬೇಕು. ಈ ನಾಡಿನ ಅಸ್ಮಿತೆಯ ರಕ್ಷಣೆಯಲ್ಲಿ ಯಾವುದೇ ರಾಜಿ ಇರಬಾರದು ಎಂದು ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಹೇಳಿದರು.

ದೊಡ್ಡಬಳ್ಳಾಪುರ: ಕನ್ನಡಿಗರ ಸಮಗ್ರ ಹಿತಾಸಕ್ತಿಯನ್ನು ಕಾಯುವ ಕೆಲಸವನ್ನು ಆಳುವ ಸರ್ಕಾರಗಳು ಮಾಡಬೇಕು. ಈ ನಾಡಿನ ಅಸ್ಮಿತೆಯ ರಕ್ಷಣೆಯಲ್ಲಿ ಯಾವುದೇ ರಾಜಿ ಇರಬಾರದು ಎಂದು ಯುವ ಕರ್ನಾಟಕ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಹೇಳಿದರು.

ಇಲ್ಲಿನ ಡಾ.ರಾಜ್‌ಕುಮಾರ್‌ ಕಲಾ ಮಂದಿರ(ಪುರಭವನ)ದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯುವ ಕರ್ನಾಟಕ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ, ಕನ್ನಡಿಗ, ಕರ್ನಾಟಕದ ಸಿದ್ದಾಂತದ ಅಡಿಯಲ್ಲಿ ಯುವಜನರನ್ನು ಸಂಘಟಿತರನ್ನಾಗಿ ಜಾಗೃತಗೊಳಿಸುವುದೇ ಯುವ ಕರ್ನಾಟಕ ವೇದಿಕೆಯ ಸಿದ್ದಾಂತವಾಗಿದೆ. ದೊಡ್ಡಬಳ್ಳಾಪುರದಂತಹ ಬೆಂಗಳೂರಿಗೆ ಹೊಂದಿಕೊಂಡಿರುವ ಪಟ್ಟಣಗಳಲ್ಲಿ ನೆಲ, ಜಲ, ಭಾಷೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಪ್ರಧಾನ ಆದ್ಯತೆಯ ವಿಷಯಗಳಾಗಿ ಪರಿಗಣಿಸಿ ವ್ಯವಸ್ಥಿತ ಹೋರಾಟ ರೂಪಿಸಲಾಗುವುದು. ಕೈಗಾರಿಕಾ ಪ್ರದೇಶಗಳಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶಗಳ ವಂಚನೆ ನಡೆದಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಯುವ ಕರ್ನಾಟಕ ವೇದಿಕೆ ಗಂಭೀರವಾಗಿ ಪರಿಗಣಿಸುತ್ತದೆ ಎಂದರು.

ಸ್ಥಳೀಯ ನೇಕಾರಿಕೆಯಲ್ಲಿ ವಲಸಿಗರ ಪ್ರಮಾಣ ಹೆಚ್ಚುತ್ತಿದ್ದು, ಸ್ಥಳೀಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿರುವ ಕುರಿತು ನೇಕಾರ ಮಹಿಳೆಯರು ಪ್ರಸ್ತಾಪಿಸಿದ ವಿಚಾರವನ್ನು ತಮ್ಮ ಸಂಘಟನೆ ಹೆಚ್ಚಿನ ಕಾಳಜಿಯಿಂದ ಗಮನಿಸುತ್ತದೆ. ಈ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಸ್ಥಳೀಯರ ಹಿತಾಸಕ್ತಿ ಹಾಗೂ ಉದ್ಯೋಗದ ಹಕ್ಕನ್ನು ರಕ್ಷಿಸಲು ಹೊಣೆಯಾಧಾರಿತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.

ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್‌ ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಕನ್ನಡಿಗರ ಸಮಸ್ಯೆಗಳ ಸ್ವರೂಪವೂ ಬದಲಾಗಿದೆ. ಹೋರಾಟದ ದಿಕ್ಕುದೆಸೆ ಕೂಡ ಹೊಸ ಮಾದರಿಗಳಲ್ಲಿ ರೂಪುಗೊಳ್ಳುವುದು ಅಗತ್ಯ ಎಂದರು.

ಇದೇ ವೇಳೆ ತಾಲೂಕಿನ ಆಯ್ದ ಪತ್ರಕರ್ತರು, ಹಿರಿಯ ಕಲಾವಿದರು, ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರ, ಉಪಾಧ್ಯಕ್ಷ ಮಲ್ಲೇಶ್‌, ಸದಸ್ಯೆ ಪ್ರಭಾ ನಾಗರಾಜ್, ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ.ವತ್ಸಲ, ರಾಜ್ಯ ಯುವ ಘಟಕ ಅಧ್ಯಕ್ಷ ನವೀನ್‌ ನರಸಿಂಹ, ಉಪಾಧ್ಯಕ್ಷ ಮೂರ್ತಿಗೌಡ, ಖಜಾಂಚಿ ಕನ್ನಡ ಮಂಜಣ್ಣ, ಸಲಹೆಗಾರ ಗೋವಿಂದೇಗೌಡ, ವಿವಿಧ ಘಟಕಗಳ ಮುಖ್ಯಸ್ಥರಾದ ಕಾರ್ತಿಕ್‌ ಶೆಟ್ಟಿ, ಚಂದನ್‌ಗೌಡ, ಸಿದ್ದುದರ್ಶನ್‌, ಸಂತೋಷ್‌, ವಿನಯ್‌ಕುಮಾರ್‌, ತಾಲೂಕು ಸಮಿತಿ ಗೌರವಾಧ್ಯಕ್ಷ ಟಿ.ಜಿ.ಮಂಜುನಾಥ್, ಅಧ್ಯಕ್ಷ ಟಿ.ಸಿ.ತಮ್ಮೇಗೌಡ ಮತ್ತಿತರರು ಭಾಗವಹಿಸಿದ್ದರು.

ತಾಲೂಕು ಸಮಿತಿ ಪದಾಧಿಕಾರಿಗಳು:

ನೂತನವಾಗಿ ಅಸ್ತಿತ್ವಕ್ಕೆ ಬಂದ ಯುವ ಕರ್ನಾಟಕ ವೇದಿಕೆ ದೊಡ್ಡಬಳ್ಳಾಪುರ ತಾಲೂಕು ಸಮಿತಿಗೆ ಟಿ.ಜಿ.ಮಂಜುನಾಥ್(ಗೌರವಾಧ್ಯಕ್ಷರು), ಟಿ.ಸಿ.ತಮ್ಮೇಗೌಡ(ಅಧ್ಯಕ್ಷರು), ಸೋಮಣ್ಣ(ಉಪಾಧ್ಯಕ್ಷ), ಕರುಣಾಕರ್‌(ಸಹ ಕಾರ್ಯದರ್ಶಿ), ಪಿ.ಬಿ.ಮಹೇಶ್‌(ಖಜಾಂಚಿ), ಕೆ.ರಾಮಮೂರ್ತಿ(ಕಾರ್ಯದರ್ಶಿ), ಕೆ.ಎಸ್.ಕೃಷ್ಣ(ಪ್ರಧಾನ ಕಾರ್ಯದರ್ಶಿ), ಶ್ರೀನಾಥ್ ಮತ್ತು ಆರ್.ಕಾಂತರಾಜು(ಮುಖ್ಯ ಸಂಚಾಲಕರು), ಆರ್.ಮಂಜುನಾಥ್(ಸಹ ಸಂಚಾಲಕ), ಎಂ.ಹರ್ಷ(ಸಹ ಕಾರ್ಯದರ್ಶಿ), ಚಂದ್ರುಶೆಟ್ಟಿ ಮತ್ತು ರವಿಕುಮಾರ್(ಸಂಚಾಲಕರು) ಆಯ್ಕೆಯಾಗಿದ್ದು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯ ರಾಜ್ಯ ಗೌರವಾಧ್ಯಕ್ಷ ದೊಮ್ಮಲೂರು ಶ್ರೀನಿವಾಸ್‌ ಧ್ವಜಾರೋಹಣ ನೆರವೇರಿಸಿದರು. ಡಾ.ವಿಷ್ಣುವರ್ಧನ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

18ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಭಾನುವಾರ ಯುವ ಕರ್ನಾಟಕ ವೇದಿಕೆ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮೂಹಿಕ ವಿವಾಹದಿಂದ ಬಡವರಿಗೆ ಅನುಕೂಲ
ಇ-ಆಫೀಸ್ ಬಳಕೆ ರಾಜ್ಯದಲ್ಲೇ ಕಲಬುರಗಿ ನಂಬರ್-1