ಭರ್ತಿಯಾಗದ ಕೆರೆಕಟ್ಟೆ, ಬಾರದ ವಲಸೆ ಪಕ್ಷಿಗಳು

KannadaprabhaNewsNetwork |  
Published : Oct 26, 2023, 01:00 AM ISTUpdated : Oct 26, 2023, 01:01 AM IST
ಹಂಸಭಾವಿ ಸಮೀಪದ ದೂಪದಹಳ್ಳಿಯ ಕಡಲಕಟ್ಟಿ ಕೆರೆ ನೀರಿಲ್ಲದೇ ಬಣಗುಡುತ್ತಿದ್ದು, ವಲಸೆ ಪಕ್ಷಿಗಳು ಕಣ್ಮರೆಯಾಗಿವೆ | Kannada Prabha

ಸಾರಾಂಶ

ಕಳೆದ ಕೆಲವು ವರ್ಷಗಳಿಂದ ಕೆರೆಗಳ ಅಂಗಳದಲ್ಲಿ ಹಾರಾಡುತ್ತಿದ್ದ ಬಾನಾಡಿಗಳು ಈ ಸಲ ಮಾಯವಾಗಿವೆ. ಬರಗಾಲವು ಇತ್ತ ರೈತರನ್ನು ಕಂಗಾಲಾಗಿಸಿದ್ದರೆ, ವಲಸೆ ಪಕ್ಷಿಗಳನ್ನೂ ಇತ್ತ ಸುಳಿಯದಂತೆ ಮಾಡಿದೆ.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಕಳೆದ ಕೆಲವು ವರ್ಷಗಳಿಂದ ಕೆರೆಗಳ ಅಂಗಳದಲ್ಲಿ ಹಾರಾಡುತ್ತಿದ್ದ ಬಾನಾಡಿಗಳು ಈ ಸಲ ಮಾಯವಾಗಿವೆ. ಬರಗಾಲವು ಇತ್ತ ರೈತರನ್ನು ಕಂಗಾಲಾಗಿಸಿದ್ದರೆ, ವಲಸೆ ಪಕ್ಷಿಗಳನ್ನೂ ಇತ್ತ ಸುಳಿಯದಂತೆ ಮಾಡಿದೆ.

ಪ್ರತಿ ಸಲ ಮುಂಗಾರು ಮುಗಿಯುತ್ತಿದ್ದಂತೆ ಸಾವಿರಾರು ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಬರುತ್ತಿದ್ದ ಕಡೆ ಈಗ ಹುಡುಕಿದರೂ ಒಂದೂ ಪಕ್ಷಿಯೂ ಕಾಣ ಸಿಗುವುದಿಲ್ಲ. ಹಿರೇಕೆರೂರು ತಾಲೂಕಿನ ದೂಪದಹಳ್ಳಿ -ನೂಲಗೇರಿ ಗ್ರಾಮಗಳ ನಡುವೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಕರಲಕಟ್ಟೆ ಕೆರೆಯ ಸದ್ಯದ ಸ್ಥಿತಿ ಇದು.

ಹಾವೇರಿ ಸಮೀಪದ ಹೆಗ್ಗೇರಿ, ಗುತ್ತಲ ಸಮೀಪದ ದೊಡ್ಡಕೆರೆ ಹಾಗೂ ಅಕ್ಕಿಆಲೂರಿನ ಈಶ್ವರ ಕೆರೆಯಂತೆಯೇ ಈ ಕೆರೆಗೂ ವಿದೇಶಿ ಹಕ್ಕಿಗಳು ನೂರಾರು ಕಿಮೀ ದೂರದಿಂದ ವಲಸೆ ಬಂದು ತಮ್ಮ ಸಂತಾನ ವೃದ್ಧಿಸಿಕೊಳ್ಳುತ್ತಿದ್ದವು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ಕೆರೆಗೆ ಹನಿ ನೀರೂ ಬಂದಿಲ್ಲ. ಹೀಗಾಗಿ ಇಲ್ಲಿ ವಲಸೆ ಹಕ್ಕಿಗಳ ಚಿಲಿಪಿಲಿ ಸದ್ದು ಮಾಯವಾಗಿದೆ.

ಅಗಸನಕಟ್ಟೆ ಮೂಲ ತಾಣ:

2009ರಿಂದಲೂ ಈ ವಲಸೆ ಹಕ್ಕಿಗಳಿಗೆ ದೂಪದಹಳ್ಳಿಯ ಅಗಸನಕಟ್ಟೆ ಕೆರೆ ಮೂಲ ತಾಣವಾಗಿತ್ತು. ಆದರೆ ಅಲ್ಲಿ ಹಕ್ಕಿಗಳ ನೆಲೆಯಾಗಿದ್ದ ಜಾಲಿಯ ಮರಗಳು ಸುತ್ತಲಿನ ಒತ್ತುವರಿಯಿಂದ ಕೊಡಲಿ ಪೆಟ್ಟಿಗೆ ತುತ್ತಾದವು. ಹೀಗಾಗಿ ಈ ವಲಸೆ ಹಕ್ಕಿಗಳು ಅದೇ ಗ್ರಾಮದ ಪಕ್ಕದ ಕರಲಕಟ್ಟೆ ಕೆರೆಯನ್ನು ತಮ್ಮ ಸಂತಾನೋತ್ಪತ್ತಿಗೆ ಆಯ್ಕೆ ಮಾಡಿಕೊಂಡಿದ್ದವು.

ಪ್ರತಿ ವರ್ಷ ಜೂನ್‌ ತಿಂಗಳ ಆರಂಭದಿಂದ ಫೆಬ್ರುವರಿ ಕೊನೆಯ ತನಕ ಕಾಣಸಿಗುತ್ತಿದ್ದ ಹಕ್ಕಿಗಳು, ಈ ವರ್ಷ ಮಳೆಯ ಕೊರತೆಯಿಂದ ಬಂದಿಲ್ಲ.

ದೇಶಿ, ವಿದೇಶಿ ಹಕ್ಕಿಗಳ ಕಲರವ:

ಬಿಳಿಕೊಕ್ಕರೆ, ಕಂದು ಕೊಕ್ಕರೆ, ಕೃಷ್ಣವಾಹನ ಪಕ್ಷಿ, ಗೀಜುಗ, ಚಿಟಗುಬ್ಬಿ, ಗುಣಮಣಕ, ಹೆಬ್ಬಾತು, ಚಮಚ ಚುಂಚಿನ ಬಾತುಕೋಳಿ, ಬಾತುಕೋಳಿ, ನೀರುಕೋಳಿ, ಭಾರತೀಯ ನೀರುಕಾಗೆ, ಕಾಮನ್‌ ಮೈನಾ, ಕುಂಡೆಕುಸುಕ, ಕಾಜಾಣ, ಬೆಳ್ಳಕ್ಕಿ, ಜೇನುಹಿಡುಕ, ನೀಲಕಂಠ, ಕಿಂಗ್‌ ಫಿಷರ್‌, ಟಿಟ್ಟಿಭ ಹಾಗೂ ಗರುಡ ಸೇರಿದಂತೆ ಅನೇಕ ಜಾತಿಯ ಹಕ್ಕಿಗಳು ಇಲ್ಲಿಗೆ ಬರುತ್ತಿದ್ದವು. ಕೆರೆಯ ಮಧ್ಯ ಭಾಗದಲ್ಲಿ ಜಾಲಿ ಮರಗಳಿರುವ ಕಾರಣಕ್ಕೆ ವಲಸೆ ಹಕ್ಕಿಗಳಿಗೆ ತಮ್ಮ ಸಂತಾನ ವೃದ್ಧಿಗೆ ಅನುಕೂಲವಾಗುತ್ತಿತ್ತು.

ಡ್ವಾರ್ಫ್‌ ಕ್ಯಾಸನೋರಿ, ಕ್ರೈಸೆಡ್‌ಗಾರ್ನ್‌, ಕ್ಯಾಲಿಫೋರ್ನಿಯಾ ಬುರ್ಲಿ, ಆಸ್ಟ್ರಿಚ್‌ ಸಿಪಾಯಿ ಕೊಕ್ಕರೆ, ಬುಲ್ಬುಲ್‌ ಹಕ್ಕಿ, ಒಂಟಿಕಾಲಿನ ಕೊಕ್ಕರೆ, ಹಮ್ಮಿಂಗ್‌ ಬರ್ಡ್‌ ನಂತಹ ವಿದೇಶಿ ಹಕ್ಕಿಗಳೂ ಇಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತವೆ ಎನ್ನುತ್ತಾರೆ ದೂಪದಹಳ್ಳಿಯ ಶಿಕ್ಷಕ ಈರಣ್ಣ ಕಾಟೇನಹಳ್ಳಿ.

ಈ ಸಲದ ಬರಗಾಲವು ಜೀವಸಂಕುಲಕ್ಕೆ ಆಪತ್ತು ತಂದಿಡುತ್ತಿದೆ. ಜಿಲ್ಲೆಯಲ್ಲಿರುವ ಸಾವಿರಾರು ಕೆರೆಕಟ್ಟೆಗಳು ಬತ್ತುತ್ತಿವೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ನದಿಗಳಲ್ಲಿ ಈಗಲೇ ಹರಿವು ಕಡಿಮೆಯಾಗಿದೆ. ಬಿತ್ತಿದ ಬೆಳೆ ಬಾಡಿ ಕೆಂಪಗಾಗುತ್ತಿವೆ. ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅದೇ ರೀತಿ ಜಾನುವಾರುಗಳಿಗೂ ನೀರಿನ ಅಭಾವ ಎದುರಾಗುವುದು ನಿಶ್ಚಿತ. ಅದೇ ರೀತಿ ವಲಸೆ ಪಕ್ಷಿಗಳು ಕೂಡ ಜಿಲ್ಲೆಯತ್ತ ಸುಳಿಯದಿರುವುದು ಬರದ ತೀವ್ರತೆಗೆ ಸಾಕ್ಷಿಯಾಗಿದೆ.

ಪಕ್ಷಿಧಾಮದ ಅಭಿವೃದ್ಧಿಗೆ ಯಾವ ಜನಪ್ರತಿನಿಧಿಗೂ ಆಸಕ್ತಿ ಇಲ್ಲ. ಹಕ್ಕಿಗಳ ವಾಸದ ತಾಣವಾಗಿರುವ ಕೆರೆಕಟ್ಟೆಗಳ ಹೂಳು ತೆಗೆಸಿ, ಕೆರೆಗೆ ನೀರು ತುಂಬಿಸಿದರೆ ಕಣ್ಮರೆಯಾಗಿರುವ ಪಕ್ಷಿಗಳನ್ನು ಮತ್ತೆ ಕಾಣಬಹುದು. ಮಳೆ ಕೊರತೆಯಿಂದ ಬರಗಾಲ ಆವರಿಸಿದ್ದು, ಸಕಲ ಜೀವರಾಶಿಗಳಿಗೂ ತೊಂದರೆಯಾಗಿದೆ ಎನ್ನುತ್ತಾರೆ ಸ್ಥಳೀಯ ಮಲ್ಲಿಕಾರ್ಜುನ ಬಣಕಾರ.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ