ತಾಯ್ನಾಡನ್ನು ಸಾಹಿತ್ಯ ರೂಪದಲ್ಲಿ ಬಣ್ಣಿಸಿದ ಪಂಪ

KannadaprabhaNewsNetwork | Published : Aug 30, 2024 1:13 AM

ಸಾರಾಂಶ

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಂಪ ಅಧ್ಯಯನ ಪೀಠ ಉದ್ಘಾಟಿಸಿದ ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ, ಪಂಪನನ್ನು ಹೊಸ ಕಾಲಕ್ಕೆ ತಕ್ಕಂತೆ ನೋಡುವ ಅಗತ್ಯವಿದೆ ಎಂದು ಹೇಳಿದರು.

ಧಾರವಾಡ:

ಆದಿ‌ ಕವಿ ಪಂಪನನ್ನು ಪ್ರಸ್ತುತ ಸಂದರ್ಭಕ್ಕೆ ನೋಡಬೇಕಾದ ಅಗತ್ಯವಿದ್ದು, ತಾಯ್ನಾಡನ್ನು ಕೃತಿ, ಸಾಹಿತ್ಯ ರೂಪದಲ್ಲಿ ಬಣ್ಣಿಸಿ ಹೊಗಳಿದ್ದ ಕೀರ್ತಿ ಪಂಪನಿಗೆ ಸಲ್ಲುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಹಂಪ ನಾಗರಾಜಯ್ಯ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದ ಆಶ್ರಯದಲ್ಲಿ ಪಂಪ ಅಧ್ಯಯನ ಪೀಠ ಉದ್ಘಾಟನೆ, ಗ್ರಂಥಗಳ ಲೋಕಾರ್ಪಣೆ, ಪಂಪನ ಭಾವಚಿತ್ರದ ಅನಾವರಣ ಮತ್ತು ಪಂಪ ವ್ಯಾಖ್ಯಾನ ಮಾಲೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪಂಪನನ್ನು ಹೊಸ ಕಾಲಕ್ಕೆ ‌ತಕ್ಕಂತೆ ನೋಡುವ ಅಗತ್ಯವಿದೆ. ಪಂಪನು ದೇಶೀಯ ಮಾರ್ಗಗಳನ್ನು ಸೇರಿಸಿಕೊಂಡು ಅನೇಕ ಕೃತಿ ರಚಿಸಿದನು. ಪಂಪನ ಸಾಹಿತ್ಯ ಸಂಸ್ಕೃತ ಸಾಹಿತ್ಯದಂತಿರುವುದು ವಿಶೇಷ. ಕನ್ನಡದ ಶೈಲಿಯು ದೇಶೀಯ ಶೈಲಿಯಲ್ಲಿ ಅನಿಸಿತ್ತು ಎಂದರು.

ತನ್ನ ದೇಶಪ್ರೇಮವನ್ನು ತನ್ನ ಕೃತಿ, ಸಾಹಿತ್ಯ ರೂಪದಲ್ಲಿ ಬಣ್ಣಿಸಿ ಪಂಪ ತನ್ನ ತಾಯ್ನಾಡನ್ನು ಹೊಗಳಿದ್ದಾನೆ. ಪಂಪ, ರನ್ನ, ಜನ್ನ ಹೀಗೆ ಮುಂತಾದ ನಾಡಿನ ಪ್ರಮುಖ ಕವಿಗಳಿಗಿಂತ ತಮ್ಮದೇ ಆದಂತಹ ಒಂದು ವಿಭಿನ್ನ ರೀತಿಯಲ್ಲಿ ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ನಾಡಿನ ಸಾಹಿತ್ಯವನ್ನೂ ಬೇರೊಂದು ಭಾಷೆಗೆ ಅನುವಾದ ಮಾಡುವ ಮೂಲಕ ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಕಾಣಲು ಸಾಧ್ಯ ಎಂದು ಹೇಳಿದರು.

ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಕಾಲೇಜು, ಪದವಿ ಪೂರ್ವ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಹಳೆಗನ್ನಡ ಭಾಷೆಯಲ್ಲಿ ಬೋಧಿಸಬೇಕು. ವಿದ್ಯಾರ್ಥಿಗಳಿಗೆ ಭಾಷೆಯ ಮೇಲೆ ಪ್ರೀತಿ ಹೆಚ್ಚಾಗುವಂತೆ, ಭಾಷೆ ಪ್ರೀತಿಸುವಂತೆ ಆಕರ್ಷಸಿಬೇಕು ಎಂದರು.

ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ವೈ.ಎನ್. ಮಟ್ಟಿಹಾಳ, ಕೆಲವು ಕವಿಗಳು ಕಾಲದ ಒತ್ತಡ ಎಂದು ಅಲ್ಲೇ ನಿಂತು ಬಿಡುತ್ತಾರೆ. ಆದರೆ ಪಂಪನಂತಹ ಕವಿಗಳು ಕನ್ನಡ ಭಾಷೆಗೆ ಸಮತೋಲನವಾಗಿ ತನ್ನ ಕಾವ್ಯದ ಮೂಲಕ ಯಾವ ಕಾಲಕ್ಕೂ ಸಲ್ಲುತ್ತಾರೆ. ಹಾಗಾಗಿ ಕನ್ನಡ ಅಧ್ಯಯನ ಪೀಠದಲ್ಲಿ ನಾವು ಪಂಪನನ್ನು‌ ಮೊತ್ತಮ್ಮೆ ಮೊಳಕೆ ಒಡೆದಿದ್ದು ಸಂತಸದ ಸಂಗತಿ ಎಂದರು.

ಡಾ. ಶಾಂತಿನಾಥ ದಿಬ್ಬದ, ಪಂಪನ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಣಕಾಸು ವಿಭಾಗದ ಅಧಿಕಾರಿ ಡಾ. ಸಿ. ಕೃಷ್ಣ ನಾಯಕ, ಕರ್ನಾಟಕ ವಿಶ್ವ ವಿದ್ಯಾಲಯದ ಆದಿಕವಿ ಪಂಪ ಅಧ್ಯಯನ ಪೀಠದ ಸಂಯೋಜಕ ಡಾ. ಎಂ.ನಾಗಯ್ಯ ಇದ್ದರು.

Share this article