ಗಣಿಗಾರಿಕೆ ಪ್ರಕರಣದಲ್ಲಿ ಆನಂದ ಸಿಂಗ್‌ ಖುಲಾಸೆ, ರಾಜಕಾರಣದಲ್ಲಿ ಸಕ್ರಿಯ?

KannadaprabhaNewsNetwork | Published : Mar 7, 2025 11:45 PM

ಸಾರಾಂಶ

ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಮಾಜಿ ಸಚಿವ ಆನಂದ ಸಿಂಗ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಬಿಗ್ ರಿಲೀಫ್‌ ನೀಡಿದ್ದು, ಸಿಂಗ್ ಮತ್ತೆ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಈಗ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುನ್ನಲೆಗೆ ಬಂದಿದೆ.

ಕೃಷ್ಣ ಲಮಾಣಿ

ಹೊಸಪೇಟೆ: ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಮಾಜಿ ಸಚಿವ ಆನಂದ ಸಿಂಗ್‌ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಬಿಗ್ ರಿಲೀಫ್‌ ನೀಡಿದ್ದು, ಸಿಂಗ್ ಮತ್ತೆ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಈಗ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮುನ್ನಲೆಗೆ ಬಂದಿದೆ.

ಮಾಜಿ ಸಚಿವ ಆನಂದ ಸಿಂಗ್‌ ವ್ಯಾಸನಕೆರೆ ಪ್ರದೇಶದ ಎಸ್‌.ಬಿ. ಮಿನಿರಲ್ಸ್‌ನಲ್ಲಿ 16, 687 ಮೆಟ್ರಿಕ್‌ ಟನ್‌ ಅದಿರು ರಾಜಧನ ವಂಚಿಸಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಹೊರಿಸಲಾಗಿತ್ತು. ಈ ಪ್ರಕರಣದಲ್ಲಿ ಗೋವಾ ಸಚಿವ ರೋಹನ್‌ ಕೌಂಟೆ ವಿರುದ್ಧವೂ ಆರೋಪ ಹೊರಿಸಲಾಗಿತ್ತು. ಲೋಕಾಯುಕ್ತ ವಿಶೇಷ ತನಿಖಾ ತಂಡ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆದು, ಈಗ ನ್ಯಾಯಾಲಯ ಖುಲಾಸೆಗೊಳಿಸಿದೆ.

ರಾಜಕೀಯಕ್ಕೆ ಪೂರಕ: ಮಾಜಿ ಸಚಿವ ಆನಂದ ಸಿಂಗ್‌ ವಿರುದ್ಧದ ಪ್ರಕರಣದಲ್ಲಿ ಈಗ ರಿಲೀಫ್‌ ದೊರೆತಿದ್ದು, ಸಿಬಿಐ ಸೇರಿ ಇನ್ನೂ ಕೆಲ ಗಣಿಗಾರಿಕೆ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಆನಂದ ಸಿಂಗ್‌ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಪ್ರಕರಣದಲ್ಲಿ ರಿಲೀಫ್‌ ಸಿಕ್ಕಿರುವುದು ಈ ಭಾಗದಲ್ಲಿ ಬಿಜೆಪಿ ಸಂಘಟನೆಗೆ ಅನುಕೂಲ ಆಗಲಿದೆ ಎಂದು ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು ತಿಳಿಸಿದರು.

ಆನಂದ ಸಿಂಗ್‌ ಅವರು ವಿಜಯನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಲ್ಲದೇ, ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ವಿಜಯನಗರ ಜಿಲ್ಲಾ ರಚನೆ ಮಾಡಿದ ಹೆಗ್ಗಳಿಕೆ ಅವರಿಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲೇ ಹೆಚ್ಚು ತೊಡಗಿಸಿಕೊಂಡಿರುವ ಅವರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ದೂರ ಉಳಿದಿದ್ದಾರೆ. 2023ರ ಚುನಾವಣೆಯಲ್ಲಿ ತನ್ನ ಪುತ್ರ ಸಿದ್ಧಾರ್ಥ ಸಿಂಗ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಶಾಸಕ ಎಚ್‌.ಆರ್‌. ಗವಿಯಪ್ಪ ಅವರ ವಿರುದ್ಧ ಸಿದ್ಧಾರ್ಥ ಸಿಂಗ್‌ ಪರಾಭವಗೊಂಡಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದ ಆನಂದ ಸಿಂಗ್ ಹಾಗೂ ಸಿದ್ಧಾರ್ಥ ಸಿಂಗ್‌ ಅವರು ಸಂಡೂರು ಉಪ ಚುನಾವಣೆಯಿಂದ ದೂರವೇ ಉಳಿದಿದ್ದರು.

ಈಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಗ್‌ ರಿಲೀಫ್‌ ದೊರೆತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಒಡಮೂಡಿದೆ. ಜಿಪಂ, ತಾಪಂ ಚುನಾವಣೆಗಳಲ್ಲಿ ಆನಂದ ಸಿಂಗ್‌ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಲೆಕ್ಕಾಚಾರವೂ ಮೊಳೆತಿದೆ.

ಆನಂದ ಸಿಂಗ್‌ ವಿರುದ್ಧದ ಹಳೇ ಪ್ರಕರಣದಲ್ಲಿ ಈಗ ರಿಲೀಫ್‌ ಸಿಕ್ಕಿರುವ ಹಿನ್ನೆಲೆಯಲ್ಲಿ ಅವರು ಮತ್ತೆ ಹೊಸಪೇಟೆಯನ್ನು ಕೇಂದ್ರೀಕರಿಸಿ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ಚರ್ಚೆಯೂ ಹುಟ್ಟಿದೆ. ಆದರೆ, ಅವರ ಆಪ್ತ ವಲಯದ ಪ್ರಕಾರ ಸಿಬಿಐ ಸೇರಿದಂತೆ ಇನ್ನುಳಿದ ಪ್ರಕರಣಗಳ ವಿಚಾರಣೆ ಇರುವ ಹಿನ್ನೆಲೆಯಲ್ಲಿ ಈಗಲೇ ಅವರು ರಾಜಕಾರಣದಲ್ಲಿ ತೊಡಗಿಸಿಕೊಳ್ಳುವುದು ಕಷ್ಟ. ಈ ಪ್ರಕರಣದಲ್ಲಿ ಗೋವಾದ ಸಚಿವರಿಗೂ ರಿಲೀಫ್‌ ದೊರೆತಿದೆ. ಆನಂದ ಸಿಂಗ್‌ ಅವರು ಇದುವರೆಗೆ ರಾಜಕಾರಣದ ಬಗ್ಗೆ ನಮ್ಮ ಬಳಿ ಚರ್ಚಿಸಿಲ್ಲ ಎಂದು ಅವರ ಆಪ್ತ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.

ಮಾಜಿ ಸಚಿವ ಆನಂದ ಸಿಂಗ್‌ ಅವರು ಸಾರ್ವಜನಿಕ ಸಭೆ, ಸಮಾರಂಭಗಳಿಂದಲೂ ದೂರ ಉಳಿದಿದ್ದಾರೆ. ಹಂಪಿ ಉತ್ಸವಕ್ಕೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಆಹ್ವಾನಿಸಿದರೂ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ, ತನಗೆ ಹಂಪಿ ಉತ್ಸವಕ್ಕೆ ಈ ಬಾರಿ ಬರಲು ಆಗಲ್ಲ ಎಂದು ಮನದಟ್ಟು ಮಾಡಿಕೊಟ್ಟಿದ್ದರು. ಈಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಿಲೀಫ್‌ ದೊರೆತಿದ್ದು, ರಾಜಕಾರಣದಲ್ಲಿ ಸಕ್ರಿಯರಾಗಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.

Share this article