ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಕಳೆದ ತಿಂಗಳು ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ಮಾಹಿತಿಯನ್ನು ನೀಡಿದ್ದಾರೆ.ಕಳೆದ ಜೂ. 23ರಂದು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ವೇಳೆ ಸೋಂಪುರ ಹೋಬಳಿಯ ಹಳೇ ನಿಜಗಲ್ ಬಳಿ ಕಾರು ಓವರ್ ಟೇಕ್ ವಿಚಾರದಲ್ಲಿ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಹಾಗೂ ಮತ್ತೊಂದು ಕಾರಿನವರ ಜೊತೆಗೆ ಗಲಾಟೆ ನಡೆದಿತ್ತು. ಅನಂತ್ ಕುಮಾರ್ ಹೆಗಡೆ ಸೇರಿದಂತೆ ಅವರ ಕಾರು ಚಾಲಕ ಹಾಗೂ ಗನ್ ಮ್ಯಾನ್ ವಿರುದ್ದ ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ರೋಡ್ ರೇಜ್ ಪ್ರಕರಣದಲ್ಲಿ ಅನಂತ್ ಕುಮಾರ್ ಹೆಗಡೆಯವರ ಕಾರು ಚಾಲಕ ಹಾಗೂ ಗನ್‍ಮ್ಯಾನ್‍ಗೆ ನೆಲಮಂಗಲ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ ಬಳಿಕ, ಡಾಬಸ್‍ಪೇಟೆ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಮಾಜಿ ಸಂಸದರಿಗೆ ನೋಟಿಸ್ ನೀಡಿದ್ದರು.
ಈ ವಿಚಾರದಲ್ಲಿ ಠಾಣೆಗೆ ಹಾಜರಾಗಿ ಸತತ ಒಂದು ಗಂಟೆಗಳ ಕಾಲ ಅವರನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಒಳಪಡಿಸಿದರು. ಆ ದಿನ ನಡೆದ ಘಟನೆಯ ಸಂಬಂಧ ಮಾಹಿತಿ, ವಿಡಿಯೋ ಸ್ಟೇಟ್ಮೆಂಟ್ ಡ್ರೈವರ್ ಹಲ್ಲೆ ಮಾಡಿದ ವಿಚಾರ ಹೇಳಿಕೆ, ಗಲಾಟೆಯಾಗುತ್ತಿದ್ದಂತೆ ಜನ ಹೆಚ್ಚಾಗಿದ್ದಾರೆ. ಈ ಹಿನ್ನೆಲೆ ಗನ್‍ಮ್ಯಾನ್ ಭದ್ರತೆಗೆ ನಿಂತಿದ್ದ ಎಂಬುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪೊಲೀಸ್ ಠಾಣೆಯಿಂದ ಹೊರ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಅನಂತ್ ಕುಮಾರ್ ಹೆಗಡೆ ತೆರಳಿದರು. ವಿಚಾರಣಾ ಸ್ಥಳ ಬದಲಾವಣೆ : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ವಿಚಾರಣೆಗೆ ದಾಬಸ್‍ಪೇಟೆ ಪೊಲೀಸ್ ಠಾಣೆಗೆ ಬರಬೇಕಾಗಿತ್ತು ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ಎಂದು ಪೋಸ್ಟ್ ಮಾಡಿದ್ದಕ್ಕೆ ಭದ್ರತಾ ದೃಷ್ಟಿಯಿಂದ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಿಸಿದರು.ಅಪಹ್ಯಾಸಕ್ಕೀಡಾದ ಪೋಸ್ಟ್ : ಬೆಳಿಗ್ಗೆಯೇ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ ಪ್ ಗ್ರೂಪ್ ಗಳಲ್ಲಿ ಇಂದು ದಾಬಸ್‍ಪೇಟೆ ಪೊಲೀಸ್ ಠಾಣೆಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಆಗಮಿಸುತ್ತಾರೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂಭಾಗ ಆಗಮಿಸಬೇಕು ಎಂದು ಪೋಸ್ಟ್ ಮಾಡಿದ್ದರು. ಮಧ್ಯಾಹ್ನದ ವೇಳೆಗೆ ದಾಬಸ್‍ಪೇಟೆ ಪೊಲೀಸ್ ಠಾಣೆಗೆ ಆಗಮಿಸುವುದಿಲ್ಲ ರದ್ದಾಗಿದೆ ಎಂದು ಪೋಸ್ಟ್ ಮಾಡಿದ್ದು, ಇದರಿಂದ ಪೋಸ್ಟ್ ಮಾಡಿದ್ದ ಮುಖಂಡರು ಮುಜುಗರಕ್ಕೊಳಗಾಗಿದ್ದಲ್ಲದೆ ಅಪಹ್ಯಾಸಕ್ಕೀಡಾಗಿದರು. ಪೋಟೋ 5 : ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ