ನರಗುಂದ: ಕಳೆದ 6 ತಿಂಗಳ ವೇತನ ಪಾವತಿ, ಸೇವಾ ಭದ್ರತೆ, ಆರೋಗ್ಯ ವಿಮೆ, ಕೆಲಸದ ಸ್ಥಳದಲ್ಲಿ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನರೇಗಾ ಹೊರಗುತ್ತಿಗೆ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಸೋಮವಾರ ತಾಪಂ ಕಚೇರಿ ಮುಂಭಾಗ ಅಸಹಕಾರ ಚಳವಳಿ ನಡೆಸಿದರು.
ಸಂಘದ ತಾಲೂಕು ಪ್ರತಿನಿಧಿ ಹನಮಂತ ಡಂಬಳ ಮಾತನಾಡಿ, ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ, ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ಆಗದೆ ತುಂಬಾ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಹೇಳಿದರು.ನಮ್ಮ ಮಕ್ಕಳ ಶಾಲಾ ದಾಖಲಾತಿ, ಕುಟುಂಬದ ನಿರ್ವಹಣೆ, ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವೇತನ ಪಾವತಿಯಾಗದೆ ಇರುವ ಕಾರಣ ರಾಜ್ಯ ಸಂಘದ ನಿರ್ದೇಶನದಂತೆ ರಾಜ್ಯಾದ್ಯಂತ ಅಸಹಕಾರ ಚಳವಳಿ ಆರಂಭಿಸಲಾಗಿದೆ. ನಮ್ಮ ತಾಲೂಕಿನ ಎಲ್ಲಾ ನರೇಗಾ ನೌಕರರು ಕಚೇರಿಗೆ ಹಾಜರಾಗಿದ್ದರೂ ಯಾವುದೇ ಕೆಲಸ ಕಾರ್ಯಗಳನ್ನು ಕೆಲಸ ಮಾಡದೆ ಅಸಹಕಾರ ಚಳವಳಿ ಹಮ್ಮಿಕೊಂಡಿದ್ದೇವೆ ಎಂದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿದ್ದರೂ, ಹೊಸ ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಬಿಎಫ್‌ಟಿ ಸೇರಿ ವಿವಿಧ ಹುದ್ದೆಗಳಲ್ಲಿ 13ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದೇವೆ, ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗೆ ಕಳೆದ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಈ ಹಿಂದೆಯೂ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ ಮಾಡಿದ್ದೇವೆ ಆದರೂ ವೇತನ ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷರ ಭೇಟಿ:ಪಟ್ಟಣದ ತಾಪಂ ಅಸಹಕಾರ ಚಳವಳಿ ಸ್ಥಳಕ್ಕೆ ಜಿಲ್ಲಾಧ್ಯಕ್ಷ ಸುರೇಶ ಬಾಳಿಕಾಯಿ ಅವರು ಭೇಟಿ ನೀಡಿ, ಎಲ್ಲಾ ನರೇಗಾ ಸಿಬ್ಬಂದಿಗಳ ಜೊತೆಗೆ ಚರ್ಚಿಸಿದರು. ಈ ಅಸಹಕಾರ ಚಳುವಳಿ ವೇತನ ಪಾವತಿ ಅಷ್ಟೇ ಅಲ್ಲ ಆರೋಗ್ಯ ವಿಮೆ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆಗಳಿಗಾಗಿ ಈ ಹೋರಾಟ ನಡೆಯುತ್ತಿದೆ. ಇಂದಿನಿಂದ ಅಸಹಕಾರ ಚಳವಳ ಆರಂಭವಾಗಿದ್ದು, ವೇತನ ಪಾವತಿಯಾಗುವವರೆಗೂ ನಿರಂತರವಾಗಿ ಚಳವಳಿ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ನರೇಗಾ ನೌಕರರಾದ ಮಹೇಶ ಚಿತವಾಡಗಿ, ಮಂಜುನಾಥ ಹಳ್ಳದ, ಲಿಂಗರಾಜ ಮುದಿಗೌಡ್ರ, ಈರಯ್ಯ ಶಹಪೂರಮಠ, ಬಸವರಾಜ ಚಿಮ್ಮನಕಟ್ಟಿ, ಮಂಜುನಾಥ ನಾಡಗೌಡ್ರ, ಪೂರ್ಣಾನಂದ ಸುಂಕದ, ರವಿ ಭರಮಪ್ಪನವರ, ಸೇರಿದಂತೆ ಮುಂತಾದವರು ಇದ್ದರು.