ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಎಸ್.ಎನ್. ಮೆಡಿಕಲ್ ಕಾಲೇಜಿನ ಅತ್ರೆಯ ಸಭಾಂಗಣದಲ್ಲಿ ಸೋಮವಾರ ನಡೆದ ಬಿ.ವಿ.ವಿ ಸಂಘದ ಫಿಜಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಬದಲಾದ ಜೀವನ ಶೈಲಿಯಿಂದಾಗಿ ಅನೇಕ ಪ್ರಕಾರದ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಫಿಜಿಯೋಥೆರಪಿ ತಜ್ಞರ ಪಾತ್ರ ಅನನ್ಯವಾಗಿದೆ. ಬಾಗಲಕೋಟೆಯಂತಹ ಸಣ್ಣ ನಗರದಲ್ಲಿ ವಿವಿಧ ಪ್ರಕಾರದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಡಾ.ವೀರಣ್ಣ ಚರಂತಿಮಠ ಅವರ ಪ್ರಯತ್ನ ಅಭಿನಂದನಾರ್ಹವಾಗಿದೆ. ಬಿ.ವಿ.ವಿ ಸಂಘದ ಫಿಜಿಯೋಥೆರಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶೈಕ್ಷಣಿಕ ವಾತಾವರಣ ಒದಗಿಸಲಾಗಿದೆ ಎಂದು ಹೇಳಿದರು.
ಬಿ.ವಿ.ವಿ.ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ ಅಥಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಫಿಜಿಯೋಥೆರಪಿ ಶಿಕ್ಷಣ ಪಡೆಯಲು ಅವಕಾಶ ನೀಡುವುದು ಡಾ.ವೀರಣ್ಣ ಚರಂತಿಮಠ ಅವರ ಉದ್ದೇಶವಾಗಿತ್ತು. ಅವರ ಪ್ರಯತ್ನದಿಂದಾಗಿ 2019ರಲ್ಲಿ ಫಿಜಿಯೋಥೆರಪಿ ಕಾಲೇಜು ಸ್ಥಾಪನೆಯಾಯಿತು. ಬಾಗಲಕೋಟೆ ಜಿಲ್ಲೆಯಲ್ಲಿ ಸ್ಥಾಪನೆಯಾದ ಪ್ರಥಮ ಮತ್ತು ಏಕೈಕ ಫಿಜಿಯೋಥೆರಪಿ ಕಾಲೇಜು ಇದು ಎನ್ನುವ ಹೆಮ್ಮೆ ನಮ್ಮದು. 40 ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯೊಂದಿಗೆ ಆರಂಭವಾದ ಫಿಜಿಯೋಥೆರಪಿ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ವರ್ಷದಿಂದ ದಾಖಲಾತಿಯನ್ನು 60 ಕ್ಕೆ ಹೆಚ್ಚಿಸಿ ವಿಶ್ವವಿದ್ಯಾಲಯದಿಂದ ಅನುಮತಿ ದೊರೆತು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆರು ವಿಷಯಗಳಲ್ಲಿ ಎಂ.ಪಿ.ಟಿ ಕೋರ್ಸ್ ಪ್ರಾರಂಭಗೊಂಡಿದೆ. ಎಂ.ಪಿ.ಟಿ ಕೋರ್ಸ್‌ಗೆ 18 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರೆತಿದೆ. ಈಗಾಗಲೇ ಫಿಜಿಯೋಥೆರಪಿ ಕಾಲೇಜು ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.ಇದೇ ವೇಳೆ ಸಂದರ್ಭದಲ್ಲಿ ಡಾ.ವಿಜಯ ಕಾಗೆ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಎಸ್.ಎನ್.ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಮತ್ತು ಡಾ.ಸುಚಿತ್ರಾ ದಿವಾನಮಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ ಸ್ವಾಗತಿಸಿ ಬಿ.ವಿ.ವಿ ಸಂಘ ಮತ್ತು ಫಿಜಿಯೋಥೆರಪಿ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಡಾ.ಸುಚಿತ್ರಾ ದಿವಾನಮಲ್ ಪದವಿಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಶ್ರೇಯಾ ಸೌಕಾರ ಪರಿಚಯಿಸಿದರು ಮತ್ತು ಡಾ.ಮಹಾಂತೇಶ ಬಿರಡಿ ವಂದಿಸಿದರು. ಪಾಲಕರ ಪರವಾಗಿ ಬಸವರಾಜ ಮುಕ್ಕುಪ್ಪಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಡಾ.ನೇಹಾ ರಾಮದುರ್ಗ ಮಾತನಾಡಿದರು. ನೇಹಾ ಅತ್ತರ ಮತ್ತು ಈಶ್ವರಿ ಕಲಬುರಗಿ ನಿರೂಪಿಸಿದರು.ಬಿ.ವಿ.ವಿ.ಸಂಘದ ಸದಸ್ಯರು, ಆಡಳಿತಾಧಿಕಾರಿಗಳು, ವಿವಿಧ ಕ್ಷೇತ್ರಗಳ ಆಹ್ವಾನಿತ ಗಣ್ಯರು, ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಮಾಧ್ಯಮ ಮಿತ್ರರು, ಫಿಜಿಯೋಥೆರಪಿ ಕಾಲೇಜು ಮತ್ತು ಎಸ್.ಎನ್.ಮೆಡಿಕಲ್ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.