ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಯಾಲಿಕಾವಲ್‌ನಲ್ಲಿನ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ರಾಜ್ಯ ಕಚೇರಿ ಘಾಟೆ ಭವನದಲ್ಲಿ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅನಂತ ಸುಬ್ಬರಾವ್ ಅವರು ಕಾರ್ಮಿಕರ ಧ್ವನಿಯಾಗಿದ್ದರು. ತಿಂಗಳ ಹಿಂದೆ ನಡೆದ ಕೆಎಸ್ಸಾರ್ಟಿಸಿ ನೌಕರರ ಪ್ರತಿನಿಧಿಗಳ ಸಭೆಯಲ್ಲಿ ಅನಂತ ಸುಬ್ಬರಾವ್ ಪಾಲ್ಗೊಂಡು, ಚರ್ಚೆ ನಡೆಸಿದ್ದರು. ನಾನು ಸಾರಿಗೆ ಸಚಿವನಾಗಿದ್ದಾಗನಿಂದಲೂ ಅವರನ್ನು ಬಲ್ಲೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವುಂಟಾಗಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.
ಸುಬ್ಬರಾವ್ ಮೃತ ದೇಹ ದಾನ:ಕುಟುಂಬದವರ ನಿರ್ಧಾರದಂತೆ ಗುರುವಾರ ಅನಂತ ಸುಬ್ಬರಾವ್ ಅವರ ಮೃತ ದೇಹವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಗುರುವಾರ ಘಾಟೆ ಭವನದಲ್ಲಿ ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಅನಂತ ಸುಬ್ಬರಾವ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ನಂತರ ನೇರವಾಗಿ ನಿಮ್ಹಾನ್ಸ್ ಆಸ್ಪತ್ರೆಗೆ ತೆರಳಿ, ಮೃತ ದೇಹವನ್ನು ಹಸ್ತಾಂತರಿಸಲಾಯಿತು.