)
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಕರಣದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಒತ್ತುವರಿ ತೆರವಿಗೂ ಮುನ್ನ ಸರ್ಕಾರ ಸಮೀಕ್ಷೆ ನಡೆಸಿಲ್ಲ. ಎಷ್ಟು ಜನರು ಅಲ್ಲಿದ್ದರು ಎಂಬುದು ಪತ್ತೆ ಮಾಡಿಲ್ಲ. ಪುನರ್ವಸತಿ ಕಲ್ಪಿಸಿರುವ ಸ್ಥಳದಲ್ಲಿ ಸೌಲಭ್ಯವಿಲ್ಲ. 200ಕ್ಕೂ ಹೆಚ್ಚು ಜನರಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಿಲ್ಲ. ಊಟದ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಕೋಗಿಲು ಬಡಾವಣೆಯ ವಿವಾದಿತ ಜಾಗವು ಕಲ್ಲು ಕ್ವಾರಿಗೆ ನೀಡಲಾಗಿತ್ತು. ಪರವಾನಗಿ ಮುಗಿದ ಮೇಲೆ ಜಿಬಿಎಗೆ ಘನತ್ಯಾಜ್ಯ ವಿಲೇವಾರಿಗೆ ಹಂಚಿಕೆ ಮಾಡಲಾಗಿತ್ತು. 2013, 2014 ನಂತರದ ವರ್ಷಗಳಲ್ಲಿ ಎಷ್ಟೆಷ್ಟು ಮನೆಗಳು ತಲೆ ಎತ್ತಿವೆ ಎಂಬುದರ ಕುರಿತಾದ ಉಪಗ್ರಹ ಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 14.03 ಎಕರೆಯನ್ನು ಜಿಬಿಎಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅದು ಕೊಳಚೆ ನೀರು (ಲಿಚಿಡ್ ಪಾಂಡ್) ನಿಲ್ಲುವ ಸ್ಥಳವಾಗಿತ್ತು ಎಂದು ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ನಡೆಯುತ್ತಿದೆಯೇ? ಸೂರು ಮೂಲಭೂತ ಅಗತ್ಯಗಳಲ್ಲಿ ಒಂದು. ಜನರಿಗೆ ಸೂರು ಕಲ್ಪಸದೇ ಇರಲಾಗದು. ಸೂರು ಕಳೆದುಕೊಂಡಿರುವವರು ಎಲ್ಲಿದ್ದಾರೆ, ಅವರಿಗೆ ಹೇಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರವನ್ನು ಕೇಳಿತು.ಅಡ್ವೋಕೇಟ್ ಜನರಲ್ ಅವರು, ಸದ್ಯ ಪುನರ್ವಸತಿ ಕೇಂದ್ರಗಳಿಗೆ ಜನರು ಬರಲು ನಿರಾಕರಿಸುತ್ತಿದ್ದಾರೆ. ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಕುಟುಂಬಗಳು, ಅಲ್ಲಿರುವ ಜನರು, ವೈದ್ಯಕೀಯ ಮತ್ತು ಉಪಹಾರ ವ್ಯವಸ್ಥೆ ಮಾಡಿರುವ ಕುರಿತು ಜ.22ರಂದು ಸಮಗ್ರವಾದ ಪ್ರಮಾಣ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ನಂತರ ಪುನರ್ವಸತಿ ಕೇಂದ್ರದಲ್ಲಿ ಏನೆಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬುದರ ಕುರಿತು ವಿವರ ಮಾಹಿತಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಫೆ. 4ಕ್ಕೆ ಮುಂದೂಡಿತು.