ಸಿನಿಮಾ ಸಮಾಜದ ಅಂಕು-ಡೊಂಕು ತಿದ್ದಲಿ: ಸಿಎಂ

KannadaprabhaNewsNetwork |  
Published : Jan 30, 2026, 04:00 AM IST
Film Festival 10 | Kannada Prabha

ಸಾರಾಂಶ

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಮಾರಂಭದಲ್ಲಿ ‘17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಲನಚಿತ್ರಗಳು ಮನೋರಂಜನೆಗಷ್ಟೇ ಸೀಮಿತವಾಗಬಾರದು. ಸಮಾಜದ ಅಂಕು-ಡೊಂಕುಗಳನ್ನು ತಿದ್ದಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶಯ ವ್ಯಕ್ತಪಡಿಸಿದರು.

ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಸಮಾರಂಭದಲ್ಲಿ ‘17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಸಮಾನತೆ, ಬಡತನ, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರ ವಾಸ್ತವ ಸ್ಥಿತಿಯನ್ನು ಚಲನಚಿತ್ರಗಳು ತೆರೆದಿಡಬೇಕು. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ಕೆಲಸ ನಿರ್ವಹಿಸಬೇಕು. ಡಾ.ರಾಜ್‌ಕುಮಾರ್‌ ಅವರ ಚಲನಚಿತ್ರಗಳಲ್ಲಿ ಇದನ್ನು ಕಾಣಬಹುದಿತ್ತು ಎಂದು ತಿಳಿಸಿದರು.

ಬೇರೆ ದೇಶಗಳ ಜನಜೀವನ, ಸಮಾಜದ ಸಮಾನತೆ ಅಥವಾ ಅಸಮಾನತೆ ಅರ್ಥ ಮಾಡಿಕೊಳ್ಳಲು ಈ ಚಿತ್ರೋತ್ಸವ ಸುವರ್ಣ ಅವಕಾಶವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿ, ಸ್ನೇಹದಿಂದ ಕಾಣಬೇಕು. ಹೀಗಾದರೆ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಬೇರೆ ದೇಶಗಳ ಜನಜೀವನ ಹೇಗಿದೆ, ಅಲ್ಲಿ ಏಕೆ ಬದಲಾವಣೆಗಳಾಗುತ್ತಿವೆ, ಇಲ್ಲಿ ಏಕೆ ಅದು ಸಾಧ್ಯವಾಗುತ್ತಿಲ್ಲ ಎಂದು ವಾಸ್ತವ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿತ್ರರಂಗಕ್ಕೆ ಅಗತ್ಯ ಸಹಕಾರ

ಸಮಾಜಮುಖಿ ಸಿನಿಮಾ ನಿರ್ಮಾಣ ಮಾಡುವವರಿಗೆ, ಚಿತ್ರೋದ್ಯಮದ ಅಭಿವೃದ್ಧಿಗೆ ನಮ್ಮ ಸರ್ಕಾರವು ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತದೆ. ಚಿತ್ರೋತ್ಸವದ ರಾಯಭಾರಿ ಪ್ರಕಾಶ್‌ ರಾಜ್‌ ಅವರು ಸಿನಿಮಾಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದಾರೆ. ಇದು ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜ.30 ರಿಂದ ಫೆ.6 ರವರೆಗೂ ಚಿತ್ರೋತ್ಸವ ನಡೆಯಲಿದ್ದು 70 ದೇಶಗಳ ಆಯ್ದ 240 ವಿಶೇಷ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಪ್ರಶಸ್ತಿ ವಿಜೇತ 100 ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. 30ಕ್ಕೂ ಅಧಿಕ ಭಾರತೀಯ ಭಾಷೆಗಳ ಚಿತ್ರಗಳ ಪ್ರದರ್ಶನವೂ ಇರಲಿದೆ. ಕಳೆದ ಬಾರಿ ಸರ್ವ ಜನಾಂಗದ ತೋಟ ಶೀರ್ಷಿಕೆಯಡಿ ಚಿತ್ರೋತ್ಸವ ಆಯೋಜಿಸಿದ್ದು ಈ ಬಾರಿ ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಶೀರ್ಷಿಕೆಯಡಿ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ಶಾಸಕ ರಿಜ್ವಾನ್‌ ಹರ್ಷದ್‌, ನಟಿ ರುಕ್ಮಿಣಿ ವಸಂತ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಮತ್ತಿತರರು ಉಪಸ್ಥಿತರಿದ್ದರು.

ಪ್ಯಾಲೆಸ್ತೇನ್‌ ಚಿತ್ರಗಳಿಗೆ ಅವಕಾಶವಿಲ್ಲ: ಪ್ರಕಾಶ್‌ರಾಜ್‌ ವಿರೋಧ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೇನ್‌ ಚಿತ್ರಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ ಎಂದು ಚಿತ್ರೋತ್ಸವದ ರಾಯಭಾರಿಯೂ ಆಗಿರುವ ನಟ ಪ್ರಕಾಶ್‌ ರಾಜ್‌ ವಿರೋಧ ವ್ಯಕ್ತಪಡಿಸಿದರು.

ಪ್ಯಾಲೆಸ್ತೇನ್‌ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಲುವು ತೆಗೆದುಕೊಳ್ಳಬೇಕು. ಈ ಹಿಂದೆ ಇದೇ ರೀತಿ ಮಾಡಿದ್ದಾಗ ಕೇರಳ ಸರ್ಕಾರ ಇದನ್ನು ಮೀರಿ ಚಿತ್ರ ಪ್ರದರ್ಶನ ಮಾಡಿತು. ಕೇಂದ್ರದ ರಾಜಕೀಯ ಹುನ್ನಾರ ನಡೆಯುವುದಿಲ್ಲ ಎಂದು ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಬೇಕು. ಇದು ರಾಯಭಾರಿಯಾಗಿ ನನ್ನ ಮನವಿಯಲ್ಲ, ಒತ್ತಾಯ ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ