ಮಂಗಳೂರು : ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ಅವರು ಮಂಗಳವಾರ ನಸುಕಿನ ಜಾವ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದಿಢೀರ್ ಆಗಮಿಸಿ, ತನಿಖೆಗೆ ಒಳಗಾದರು.
ಅನನ್ಯಾ ಭಟ್ ನನ್ನ ಪುತ್ರಿ, 2003ರಲ್ಲಿ ಆಕೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ. ಪ್ರಕರಣದ ತನಿಖೆ ನಡೆಸಿ ಎಂದು ಆಕೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಆಗಮಿಸುವಂತೆ ಎಸ್‌ಐಟಿ ಆಕೆಗೆ ನೋಟಿಸ್ ನೀಡಿತ್ತು. ಆ.29ಕ್ಕೆ ವಿಚಾರಣೆಗೆ ಹಾಜರಾಗುವೆ ಎಂದು ಅವರು ಸಮಯಾವಕಾಶ ಕೋರಿದ್ದರು. ಈ ಮಧ್ಯೆ, ಅನಾರೋಗ್ಯದ ಕಾರಣದಿಂದ ಅವರ ಬೆಂಗಳೂರಿನ ಮನೆಗೇ ತೆರಳಿ ವಿಚಾರಣೆ ನಡೆಸಲು ಕೂಡ ಎಸ್‌ಐಟಿ ತಂಡ ಸಿದ್ಧತೆ ನಡೆಸಿತ್ತು.
ಆದರೆ, ಸ್ವತಃ ಸುಜಾತಾ ಭಟ್ ಅವರೇ ವಕೀಲರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ನೇರವಾಗಿ ಬೆಳ್ತಂಗಡಿಗೆ ಆಗಮಿಸಿದ್ದಾರೆ. ನಸುಕಿನ ಜಾವ 5 ಗಂಟೆಗೆ ಅವರು ಎಸ್‌ಐಟಿ ಕಚೇರಿಗೆ ಆಗಮಿಸಿದ ಕಾರಣ ಪೊಲೀಸ್ ತಂಡ ತರಾತುರಿಯಲ್ಲಿ ವಿಚಾರಣೆ ನಡೆಸಲು ಸಜ್ಜಾಯಿತು. ಈ ಮಧ್ಯೆ, ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಹಾಗೂ ತಂಡ ತಿಮರೋಡಿ ಮನೆ ಶೋಧಕ್ಕೆ ಮೊದಲೇ ರೂಪುರೇಷೆ ಹಾಕಿಕೊಂಡಿದ್ದ ಕಾರಣ, ಇನ್ನೊಬ್ಬ ತನಿಖಾಧಿಕಾರಿ, ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಮಾರ್ಗದರ್ಶನದಲ್ಲಿ ಸುಜಾತಾ ಅವರ ವಿಚಾರಣೆ ನಡೆಸಲಾಯಿತು.
ಬೆಳಗ್ಗೆ 10ರ ಸುಮಾರಿಗೆ ಇನ್ನೋರ್ವ ತನಿಖಾಧಿಕಾರಿ ಗುಣಪಾಲ ಅವರು ಸುಜಾತಾ ಭಟ್ ಅವರ ವಿಚಾರಣೆ ಆರಂಭಿಸಿದರು. ಸುಜಾತಾ ಭಟ್ ಅವರ ಆಸ್ತಿ ವಿವರದ ಬಗ್ಗೆ ತೀವ್ರ ವಿಚಾರಣೆ ನಡೆಸಿದ ತಂಡ, ಆಸ್ತಿಗಾಗಿಯೇ ಅನನ್ಯಾ ಭಟ್ ಪಾತ್ರ ಸೃಷ್ಟಿಯಾಯಿತೇ ಎಂಬ ಬಗ್ಗೆ ಪ್ರಶ್ನಿಸಿತು. ಅಲ್ಲದೆ, ಅನನ್ಯಾ ಭಟ್ ಅವರ ಮೂಲ ಕೆದಕಿದ್ದು, ಈ ಬಗ್ಗೆ ದಾಖಲೆಯನ್ನು ಒದಗಿಸುವಂತೆ ಸೂಚಿಸಿದೆ. ಮಧ್ಯಾಹ್ನ ಕಚೇರಿಗೇ ಊಟ ತರಿಸಿ, ತುಸು ವಿಶ್ರಾಂತಿಗೆ ಅವಕಾಶ ನೀಡಿದ ಬಳಿಕ, ಮತ್ತೆ ಅಪರಾಹ್ನ, ಸುಜಾತಾ ಭಟ್ ಅವರ ವಿಚಾರಣೆ ನಡೆಸಲಾಗಿದೆ. ಸಂಜೆವರೆಗೂ ವಿಚಾರಣೆ ನಡೆಯಿತು.