ಪತ್ರಕರ್ತರ ಮಕ್ಕಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕಡೂರುಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಚಿಕ್ಕಮಗಳೂರು ಸುದ್ದಿಗಾರ ಪತ್ರಿಕೆಯ ಸಂಪಾದಕ ಜಿ.ಎಂ.ರಾಜಶೇಖರ್ ಅವರನ್ನು ಕಡೂರು ತಾಲೂಕು ಪತ್ರಕರ್ತರ ಸಂಘದಿಂದ ಅಭಿನಂದಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಕರ್ತರ ಮಕ್ಕಳಿಗೆ ಸ್ಕಾಲರ್‌ಶಿಪ್ ವಿತರಣೆ ಕಾರ್ಯಕ್ರಮದಲ್ಲಿ ಕಡೂರು ತಾಲೂಕು ಪತ್ರಕರ್ತರ ಸಂಘ ನೀಡಿದ ಸನ್ಮಾನ ಸ್ವೀಕರಿಸಿದ ಜಿ.ಎಂ.ರಾಜಶೇಖರ್ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದ ಆಗು ಹೋಗುಗಳನ್ನು, ಅಧಿಕಾರಸ್ಥರು ಆಡಳಿತ ಚುಕ್ಕಾಣಿ ಹಿಡಿದವರು ಎಡವಿದಾಗ ನಿರ್ದಾಕ್ಷಿಣ್ಯವಾಗಿ ಎಚ್ಚರಿಸುತ್ತಾ ಕಳೆದ 3 ದಶಕಗಳಿಂದ ಪತ್ರಿಕೋದ್ಯಮದ ಅನುಭವದಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಹೋಬಳಿ ಮಟ್ಟದಿಂದಲೂ ಪತ್ರಕರ್ತರ ಒಡನಾಟ ಇಟ್ಟುಕೊಂಡು ಪತ್ರಿಕೋದ್ಯಮದಲ್ಲಿ ಹೊಸ ಚಾಪು ಮೂಡಿಸಿ ಸೇವೆ ಸಲ್ಲಿಸುತ್ತಿರುವ ನನ್ನನ್ನು ಗುರುತಿಸಿ ಕರ್ನಾಟಕ ರಾಜ್ಯ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದೆ ಎಂದರು. ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡ ಈ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಹಿರಿ- ಕಿರಿಯ- ಅನುಭವಿ ಪತ್ರಕರ್ತರ ಅಭಿಪ್ರಾಯ ಪಡೆದು ಅವರ ಮಾರ್ಗದರ್ಶನದಲ್ಲಿ ರಚನೆಯಾಗಿ ಕರ್ನಾಟಕ ನೋಂದಣಿ ಆಗಿರುವ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ ) ನೂತನ ಕ್ರಿಯಾಶೀಲ ಪತ್ರಕರ್ತರ ಪದಾಧಿಕಾರಿಗಳ ತಂಡದೊಂದಿಗೆ ರಾಜ್ಯ ವ್ಯಾಪಿ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಉದ್ದೇಶ ಹಾಗೂ ಪತ್ರಕರ್ತರಿಗೆ ಸೌಲಭ್ಯ ಕುರಿತಂತೆ ಪ್ರಮುಖ ನಗರ /ಗ್ರಾಮೀಣ ಎಂಬ ಭೇದಭಾವ ಮಾಡದೆ ಪತ್ರಕರ್ತರ ಹಿತಕ್ಕಾಗಿ ಶ್ರಮಿಸುವುದು, ರಾಜ್ಯ ಸಂಘ ಸರ್ಕಾರ ಮತ್ತು ಜನತೆ ನಡುವೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವುದು. ಪತ್ರಕರ್ತರಲ್ಲಿ ವೃತ್ತಿ ಘನತೆ, ಗೌರವ ಕಾಪಾಡುವುದು. ಪತ್ರಿಕೋದ್ಯಮದ ಮೌಲ್ಯ, ಶಿಸ್ತನ್ನು ಎತ್ತಿ ಹಿಡಿಯುವುದು.ರಾಜ್ಯ ವ್ಯಾಪಿ ಮತ್ತು ಸ್ಥಳೀಯವಾಗಿ ಪತ್ರಿಕೆಯನ್ನು ದೃಢವಾಗಿ ಬೆಳೆಸುವುದು ನಮ್ಮ ದ್ಯೇಯ ಎಂದರು. ಪತ್ರಿಕೋದ್ಯಮದಲ್ಲಿ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಹಿರಿಯ ಹಾಗೂ ಅನುಭವಿ ಪತ್ರಕರ್ತರೊಂದಿಗೆ ಪತ್ರಕರ್ತರ ಕಾರ್ಯಗಾರ ಮಾಡಲಾಗುವುದು. ಜನಪ್ರತಿನಿಧಿಗಳು ಹಾಗು ಅಧಿಕಾರಿ ವರ್ಗದೊಂದಿಗೆ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿ ಸರ್ಕಾರದ ಹಾಗೂ ಅಧಿಕಾರಿಗಳ ವರ್ಗದ ಗಮನಕ್ಕೆ ತರುವುದು ಎಂದರು. ರಾಜ್ಯ ಸಮಿತಿಯ ಸದಸ್ಯ ಮೆಣಸಿನಕಾಯಿ ಹೊಸಹಳ್ಳಿಯ ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಬ್ಯಾಲದಾಳು ಕುಮಾರ್, ಖಜಾಂಚಿ ಆಲ್ದೂರು ರಾಜೇಶ್, ಎ.ಜೆ.ಪ್ರಕಾಶ್‌ಮೂರ್ತಿ, ಕಡೂರು ತಾಲೂಕು ಅಧ್ಯಕ್ಷ ಎಂ.ಎನ್. ಜಗದೀಶ್, ಕೆ.ಎನ್.ಕೃಷ್ಣಮೂರ್ತಿ,ಬಾಲುಮಚ್ಚೇರಿ, ದೇವರಾಜ್, ಕಂಸಾಗರ ರಘು, ದೇವೇಂದ್ರ, ವಕ್ಕಲಗೆರೆ ಶಿವು, ರೇಣುಕಾಪ್ರಸಾದ್, ಟಿ.ಮಂಜಪ್ಪ, ರೇಣುಕಪ್ಪ, ಓಂಕಾರಮೂರ್ತಿ ಇದ್ದರು. 25ಕೆಕೆಡಿಯು2.ಕಡೂರು ತಾಲೂಕು ಪತ್ರಕರ್ತರ ಸಂಘದಿಂದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್ ಅವರನ್ನು ಗೌರವಿಸಲಾಯಿತು. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಜಗದೀಶ್ ಮತ್ತು ಪತ್ರಕರ್ತರು ಇದ್ದರು.