ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಅರಾಜಕತೆ: ಕಿಶೋರ್ ಕುಮಾರ್

KannadaprabhaNewsNetwork | Published : Mar 2, 2024 1:54 AM

ಸಾರಾಂಶ

ಉಚಿತ ಗ್ಯಾರಂಟಿಗಳ ಆಮಿಷದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಬರಪರಿಹಾರ ಕಾರ್ಯದಲ್ಲಿ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಕುಂಠಿತಗೊಂಡಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಅಲ್ಲದೆ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿ ಒಂದೇ ವರ್ಗದ ಅತಿಯಾದ ಓಲೈಕೆಯಲ್ಲಿ ತೊಡಗಿದೆ. ಇದಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದೇ ಸಾಕ್ಷಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ. ಅವರು ಶುಕ್ರವಾರ ಉಡುಪಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಚಿತ ಗ್ಯಾರಂಟಿಗಳ ಆಮಿಷದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಗ್ಯಾರಂಟಿಗಳನ್ನು ಘೋಷಿಸಿದಂತೆ ಯಥಾವತ್ತಾಗಿ ಜಾರಿ ಮಾಡದೆ ರಾಜ್ಯದ ಜನತೆಗೆ ಮಂಕು ಬೂದಿ ಎರಚಿದೆ. ರಾಜ್ಯದಲ್ಲಿ ಬರಗಾಲ ಆವರಿಸಿದ್ದರೂ ಬರಪರಿಹಾರ ಕಾರ್ಯದಲ್ಲಿ ವಿಫಲವಾಗಿದೆ. 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರವು ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಶೇ. 200ಕ್ಕೂ ಹೆಚ್ಚು ಮೊತ್ತವನ್ನು ರಾಜ್ಯಕ್ಕೆ ಕೊಟ್ಟಿದ್ದರೂ ಕೇಂದ್ರದತ್ತ ಬೊಟ್ಟು ಮಾಡುವುದು, ಕೇಂದ್ರದ ವಿರುದ್ಧ ಮಾತನಾಡುವುದನ್ನು ಸಿದ್ಧರಾಮಯ್ಯನವರು ಮುಂದುವರಿಸಿದ್ದಾರೆ. ರಾಜ್ಯದ ಜನತೆ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದವರು ಹೇಳಿದರು.ಕೇಂದ್ರದಿಂದ ಜನಹಿತ

ಆಹಾರ ಸಾಮಗ್ರಿಗಳ ಬೆಲೆ ಏರಿಕೆಯಿಂದ ಕಷ್ಟ ಅನುಭವಿಸುತ್ತಿುರವ ಜನ ಸಾಮಾನ್ಯರಿಗಾಗಿ ಕೇಂದ್ರ ಸರ್ಕಾರ ಕೇವಲ 27.50 ರು. ದರದಲ್ಲಿ ಗೋಧಿ ಹಿಟ್ಟು ವಿತರಿಸಲಾಗುತ್ತಿದೆ. ಭಾರತ್ ದಾಲ್ ಬ್ರ್ಯಾಂಡ್ ಮೂಲಕ ರಿಯಾಯಿತಿ ದರದಲ್ಲಿ ಕಡಲೆ ಬೇಳೆ ಮಾರಾಟ ಮಾಡಲಾಗುತ್ತಿದೆ. ಭಾರತ್ ಬ್ರ್ಯಾಂಡ್ ಹೆಸರಲ್ಲಿ 29 ರು.ಗೆ 1 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದ್ದು, ದೇಶದ ಬಡವರಿಗೆ ಸಹಕಾರಿಯಾಗಿದೆ. ಗರೀಬ್ ಕಲ್ಯಾಣ್ ಅನ್ನಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿ.ಪ್ರ. ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ, ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ವಕ್ತಾರಾರದ ಸತೀಶ್ ಶೆಟ್ಟಿ ಮುಟ್ಲುಪಾಡಿ, ವಿಜಯಕುಮಾರ್ ಉದ್ಯಾವರ, ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.

ಮಾ.5ರಂದು ಮೀನಾಕ್ಷಿ ಲೇಖಿ ಉಡುಪಿಗೆಮಾ.5ರಂದು ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಬುದ್ಧರ ಸಭೆ ಆಯೋಜಿಸಲಾಗಿದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಹಾಗೂ ಸಂಸ್ಕೃತಿ ಇಲಾಖೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಸಭೆ ಉದ್ಘಾಟಿಸಲಿದ್ದಾರೆ.ಜಿಲ್ಲೆಯ ವೈದ್ಯರು, ಉದ್ಯಮಿಗಳು, ಚಿಂತಕರು ಹಾಗೂ ವಿವಿಧ ಕ್ಷೇತರಗಳ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ - ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.

Share this article