ಕುಷ್ಟಗಿ: ವಿದ್ಯಾರ್ಥಿಗಳಿಗೆ ಪ್ರಾಚೀನ ಸಾಹಿತ್ಯ ಸಂಸ್ಕೃತಿಯನ್ನು ತಿಳಿಯಲು, ಆಳವಾದ ಅಧ್ಯಯನ ಮಾಡಲು ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆ ಎಂಬ ಕೃತಿ ತೋರುಗನ್ನಡಿಯಾಗಿದೆ ಎಂದು ಗಂಗಾವತಿಯ ಸಂಶೋಧಕ, ಪ್ರಾಂಶುಪಾಲ ಡಾ.ಜಾಜಿ ದೇವೇಂದ್ರಪ್ಪನವರು ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಂತರಿಕ ಗುಣಮಟ್ಟ ಭರವಸೆ ಕೋಶ, ಶಿವರಾಮ ಕಾರಂತ ಕನ್ನಡ ವೇದಿಕೆ ಹಾಗೂ ಶಂಕರ ಪ್ರಕಾಶನ, ಬನ ಪ್ರಕಾಶನ ಕೊಟ್ಟೂರು ಸಹಯೋಗದಲ್ಲಿ ಇಮಾಮ್ ಸಾಹೇಬ ಹಡಗಲಿ ಮತ್ತು ಮಹಾಂತೇಶ ಕೊಡಗಲಿ ಸಂಪಾದಿಸಿರುವ ಪ್ರಾಚೀನ ಕನ್ನಡ ಸಾಹಿತ್ಯ ಚರಿತ್ರೆ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ಕೃತಿಯಲ್ಲಿ ಎಲ್ಲಿಯೂ ಕಠಿಣಗೊಳಿಸದೇ ಎಳೆ ಎಳೆಯಾಗಿ ಬಿಡಿಸಿ ಬರೆದ ಈ ಪಠ್ಯರೂಪ ಬರಹ ಸ್ಪರ್ಧಾರ್ಥಿಗಳಿಗೆ ಹಾಗೂ ಬಳ್ಳಾರಿ ವಿಶ್ವವಿದ್ಯಾಲಯ ಪ್ರಥಮ ವರ್ಷ ಬಿ.ಎ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಕೃತಿಯಾಗಿದೆ ಎಂದರು.ಕೊಪ್ಪಳದ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜ ದಂಡೋತಿ, ಸಿಂಧನೂರಿನ ವಿಮರ್ಶಕ ಶರಣಪ್ಪ ಹೊಸಳ್ಳಿ ಕೃತಿಯ ಕುರಿತು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ವಿ. ಡಾಣಿಯವರು ಮಾತನಾಡಿ, ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಅನುಗುಣವಾಗಿ ಕೃತಿ ರಚಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯಾರ್ಥಿಗಳ ಕೈತಲುಪುವಂತೆ ಮಾಡಿದ ಇರ್ವರೂ ಸಂಪಾದಕರಿಗೆ ಅಭಿನಂದನೆ ಸಲ್ಲಿಸಿ; ಕಾಲೇಜಿನ ಪರವಾಗಿ ಕೃತಿ ರಚನೆಕಾರರಿಗೆ ಸನ್ಮಾನಿಸಿದರು.ಪ್ರಾಸ್ತಾವಿಕವಾಗಿ ಕನ್ನಡ ವಿಭಾಗದ ಮುಖ್ಯಸ್ಥ ರವಿ ಹಾದಿಮನಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಎ.ಬಿ. ಕೆಂಚರಡ್ಡಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ವಿ.ಎಸ್. ಗೋಟೂರ, ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶಂಕ್ರಯ್ಯ ಅಬ್ಬಿಗೇರಿಮಠ, ವೀರೇಶ ಗಜೇಂದ್ರಗಡ, ಲಾಲಸಾಬ, ಶಿವಗ್ಯಾನಪ್ಪ, ರಾಮಣ್ಣ ಪಾಲ್ಗೊಂಡಿದ್ದರು.ಶೇಕಬಾಬು ಶಿವಪುರ ನಿರೂಪಿಸಿದರು. ಡಾ.ಜೀವನಸಾಬ ಬಿನ್ನಾಳ ನಿರ್ವಹಿಸಿದರು.