ಹಂಪಿಯ ಪರಿಸರದಲ್ಲಿ ಪ್ರಾಗೈತಿಹಾಸಿಕ ಕಾಲದ ಗವಿವರ್ಣ ಚಿತ್ರಗಳು ಪತ್ತೆ

KannadaprabhaNewsNetwork |  
Published : Jun 01, 2024, 12:45 AM IST
ಹಂಪಿಯ ಪರಿಸರದಲ್ಲಿ ಪ್ರಾಗೈತಿಹಾಸಿಕ ಕಾಲದ ಗವಿವರ್ಣ ಚಿತ್ರಗಳು ಪತ್ತೆಯಾಗಿವೆ. | Kannada Prabha

ಸಾರಾಂಶ

ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಗವಿವರ್ಣ ಚಿತ್ರಗಳು ಪತ್ತೆಯಾಗಿವೆ. ಆನೆಗೊಂದಿಯ ಹತ್ತಿರದ ಪಂಪಾ ಸರೋವರಕ್ಕೆ ಹೋಗುವ ದಾರಿಯ ಎಡಬದಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಇವು ಕಂಡುಬಂದಿವೆ.

ಕೊಪ್ಪಳ: ಹಂಪಿ ವಿಶ್ವ ಪರಂಪರೆ ಪ್ರದೇಶದಲ್ಲಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಗವಿವರ್ಣ ಚಿತ್ರಗಳು ಪತ್ತೆಯಾಗಿವೆ.

ರಾಜ್ಯ ಪುರಾತತ್ತ್ವ ಸಂಗ್ರಹಾಲಯಗಳ ಪರಂಪರೆ ಇಲಾಖೆಯ ಕಮಲಾಪುರ-ಹಂಪಿಯ ಉಪ ನಿರ್ದೇಶಕ ಡಾ. ಆರ್. ಶೇಜೇಶ್ವರ ಹಾಗೂ ಪುರಾತತ್ತ್ವ ಸಹಾಯಕ ಡಾ. ಆರ್. ಮಂಜನಾಯ್ಕ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಆನೆಗೊಂದಿಯ ಹತ್ತಿರದ ಪಂಪಾ ಸರೋವರಕ್ಕೆ ಹೋಗುವ ದಾರಿಯ ಎಡಬದಿಯ ಗುಡ್ಡದಲ್ಲಿರುವ ಬಂಡೆಯಲ್ಲಿ ಇವು ಕಂಡುಬಂದಿವೆ.

ಇವು ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಚಿತ್ರಗಳಾಗಿವೆ. ನಿಂತಿರುವ ಗೂಳಿಯು ಡುಬ್ಬದಿಂದ ಕೂಡಿದ್ದು, ಈ ಗೂಳಿಯ ಕಾಲುಗಳನ್ನು ಹುಲಿಯು ಹಿಡಿದಿರುವಂತೆ ಚಿತ್ರಿಸಲಾಗಿದೆ. ಹುಲಿಯು ದಷ್ಟ-ಪುಷ್ಟವಾಗಿದ್ದು, ಪಟ್ಟೆಗಳಿಂದ ಕೂಡಿದೆ. ಹುಲಿಯು 50 ಸೆಂ.ಮೀ. ಉದ್ದ ಹಾಗೂ 20 ಸೆಂ.ಮೀ. ಅಗಲವಾಗಿದೆ ಹಾಗೂ ಗೂಳಿಯು 40. ಸೆಂ.ಮೀ. ಉದ್ದ ಹಾಗೂ 20 ಸೆಂ.ಮೀ. ಅಗಲವಾಗಿದೆ. ಇನ್ನೆರಡು ಚಿಕ್ಕ ಚಿಕ್ಕ ಗೂಳಿಗಳ ಅಸ್ಪಷ್ಟ ಚಿತ್ರಗಳು ಗೋಚರಿಸುತ್ತವೆ. ಈ ಚಿತ್ರಗಳ ಅಕ್ಕಪಕ್ಕದಲ್ಲಿ ಅಸ್ಪಷ್ಟ ಕಿತ್ತಳೆ ಕೆಂಪು ವರ್ಣದಿಂದ ಮೂಡಿಸಿದ ಇತರ ಚಿತ್ರಗಳು ಸಹ ಕಂಡುಬರುತ್ತವೆ. ಈ ಗವಿ ವರ್ಣ ಚಿತ್ರಗಳು ನೈಸರ್ಗಿಕವಾಗಿ ಎರಡು ಬಂಡೆಗಳಿರುವ ಒಂದು ಬೃಹದಾಕಾರದ ಬಂಡೆಯು ಸಣ್ಣ ಪ್ರಮಾಣದ ಬಂಡೆಯ ಮೇಲೆ ವಾಲಿ ನಿಂತಿದ್ದು, ಅದರಲ್ಲಿ ವರ್ಣಚಿತ್ರ ಮೂಡಿರುವ ಸಣ್ಣ ಬಂಡೆಗೆ ರಕ್ಷಣೆಯಂತಿದೆ. ಮಳೆ, ಗಾಳಿ, ಬಿಸಿಲು ಮುಂತಾದ ನೈಸರ್ಗಿಕ ವಿಕೋಪಕ್ಕೆ ಹಾಳಾಗದೆ ಇರುವ ಜಾಗವನ್ನು ಆಯ್ಕೆ ಮಾಡಿಕೊಂಡಿರುವುದು ಗವಿ ವರ್ಣ ಚಿತ್ರಗಳನ್ನು ಚಿತ್ರಿಸಿರುವುದು ಚಿತ್ರಕಾರನ ಕೌಶ್ಯಲತೆಯನ್ನು ಸೂಚಿಸುತ್ತದೆ.

ಇವುಗಳು ಪ್ರಾಗೈತಿಹಾಸ ಕಾಲದ್ದಾಗಿದ್ದು, ಸುಮಾರು 2500 ವರ್ಷಗಳ ಪುರಾತನ ವರ್ಣ ಚಿತ್ರಗಳೆಂದು ಹೇಳಬಹುದಾಗಿದೆ. ಗವಿ ವರ್ಣಚಿತ್ರಗಳ ಶೋಧನೆಯಲ್ಲಿ ಸಹಕರಿಸಿದ ಸಿಬ್ಬಂದಿ ವೆಂಕಟೇಶ ಅವರಿಗೆ ಡಾ. ಆರ್. ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಕಮಲಾಪುರ-ಹಂಪಿಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಪ್ರಕಟಣೆ ತಿಳಿಸಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ