- ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರುತಾಲೂಕಿನ ಮ್ಯಾಸರಹಟ್ಟಿಯಲ್ಲಿ ಕಳೆದೊಂದು ವರ್ಷದಿಂದ ಕುಡಿಯುವ ನೀರಿನ ಕೊರತೆ ಬಲವಾಗಿ ಕಾಡುತ್ತಿದ್ದು, ಸ್ಥಳೀಯರು ತಳ್ಳು ಗಾಡಿಯ ಮೂಲಕ ಒಂದು ಕಿ.ಮೀ. ದೂರಕ್ಕೆ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿ ಚಕಾರ ಎತ್ತದಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ಬಿಜಿಕೆರೆ ಗ್ರಾಮ ಪಂಚಾಯಿತಿಗೆ ಸೇರಿದ ಮ್ಯಾಸರಹಟ್ಟಿಯಲ್ಲಿ ಬಹುತೇಕ ಬುಡಕಟ್ಟು ಸಮುದಾಯ ಹೆಚ್ಚಾಗಿ ವಾಸ ಮಾಡುತ್ತಿದೆ. ಪ್ರತಿ ದಿನ ಕೂಲಿಯಿಂದಲೇ ಬದುಕನ್ನು ಕಟ್ಟಿ ಕೊಂಡಿರುವ ಇಲ್ಲಿನ ಜನತೆಗೆ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕಳೆದ ಬಾರಿ ಭೀಕರ ಬರಗಾಲದ ಹೊಡೆತಕ್ಕೆ ಸಿಲುಕಿ ಕೊಳವೆ ಬಾವಿಗಳು ಸ್ತಬ್ಧವಾಗಿರುವ ಪರಿಣಾಮ ವಾಗಿ ಕಳೆದೊಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿ ಕಾಡುತ್ತಿದೆ.ಬುಡಕಟ್ಟು ಆಚರಣೆಯುಳ್ಳ ಗ್ರಾಮದಲ್ಲಿನ ಕೊಳವೆ ಬಾವಿಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿದೆ. ನಳಗಳಲ್ಲಿ ನೀರು ನೋಡದೆ ವರ್ಷಗಳೇ ಕಳೆದಿವೆ. ಪರಿಣಾಮವಾಗಿ ಗ್ರಾಮದ ಪ್ರತಿ ಕುಟುಂಬಸ್ಥರು ನೀರು ತರಲು ತಳ್ಳುಗಾಡಿಗಳನ್ನೇ ಅವಲಂಬಿಸಿಕೊಂಡಿದ್ದಾರೆ ಆರು ಅಥವಾ ಹತ್ತು ಕೊಡಗಳು ಹಿಡಿಯುವಂಥ 300 ಕ್ಕೂ ಹೆಚ್ಚಿನ ತಳ್ಳು ಗಾಡಿಗಳು ಗ್ರಾಮದಲ್ಲಿವೆ.
ಬೆಳಗಾದ ಕೂಡಲೇ ಕೂಲಿ ಹರಸಿ ಹೋಗುವ ಕೂಲಿ ಕಾರ್ಮಿಕರು ನೀರಿಗೆ ಅಲೆದಾಡುವುದು ಕಾಣ ಸಿಗುತ್ತಿದೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ಮನೆಗಳಲ್ಲಿ ನೀರು ಸಂಗ್ರಹಿಸಿಟ್ಟು ಶಾಲೆಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದ್ದರೂ ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ಜಾಣಮೌನಿಗಳಾಗಿದ್ದಾರೆ. ಶಾಲೆ ಆರಂಭಗೊಂಡಿದ್ದು, ಅಡುಗೆ ಮಾಡಲು ಮಕ್ಕಳಿಗೆ ಸ್ನಾನಕ್ಕೆ ತುಂಬಾ ಸಮಸ್ಯೆಯಾಗಿದೆ. ಪುಟ್ಟ ಮಕ್ಕಳನ್ನು ಮನೆಗಳಲ್ಲಿ ಬಿಟ್ಟು ಪ್ರತಿದಿನವೂ ದೂರದಿಂದ ನೀರು ತರುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆ ಲಕ್ಷ್ಮಿದೇವಿ.ಒಂದುವರೆ ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮದಲ್ಲಿ 3 ಕೊಳವೆ ಬಾವಿಗಳು ಇದ್ದು ಮೂರರಲ್ಲಿ ನೀರು ಕಡಿಮೆಯಾಗಿದೆ. ಬರುವ ಅತ್ಯಲ್ಪ ನೀರಿನಲ್ಲಿ ಇಡೀ ಗ್ರಾಮಕ್ಕೆ ನೀರು ಪೂರೈಕೆ ಸಾದ್ಯವಿಲ್ಲದಾಗಿದೆ. ಇದರೊಟ್ಟಿಗೆ ಮೂರು ಕೊಳವೆ ಬಾವಿಗಳ ಪೈಕಿ ಎರಡು ಕೊಳವೆ ಬಾವಿಗಳು ಕೆಟ್ಟಿರುವುದು ಸಮಸ್ಯೆಯನ್ನು ಇನ್ನಷ್ಟು ಬಿಗುಡಾಯಿಸುವಂತೆ ಮಾಡಿದೆ. ಮಹಿಳೆಯರು, ಮಕ್ಕಳು, ವೃದ್ದರು ಎನ್ನದೆ ಕುಟುಂಬದ ಪ್ರತಿ ಸದಸ್ಯರು ತಳ್ಳುಗಾಡಿ ಹಿಡಿದು ಕೃಷಿ ಬೋರ್‌ವೆಲ್‌ಗಳ ಕಡೆ ಅಲೆದಾಡುವ ಸ್ಥಿತಿ ಎದುರಾಗಿದೆ.
ನೀರಿನ ಸಮಸ್ಯೆ ಪರಿಹಾರಕ್ಕೆಂಬಂತೆ ಹೊಸ ಬೋರ್ ವೆಲ್ ಕೊರೆಸಲು ಪಾಯಿಂಟ್ ಗುರುತಿಸಿ ತಿಂಗಳು ಕಳೆದರೂ ಬೋರ್ ವೆಲ್ ಕೊರೆದಿಲ್ಲ.ಕೆಲ ದಿನಗಳ ಹಿಂದೆ ಗ್ರಾಮದ ಕೆಲವೆಡೆ ಪಂಚಾಯಿತಿಯವರು ಹೊಸದಾಗಿ ಕುಡಿಯುವ ನೀರಿನ ಪೈಪು ಲೈನು ಕಾಮಗಾರಿ ಮಾಡಿದ್ದು ನೆಪ ಮಾತ್ರ ಎಂಬಂತಾಗಿದೆ.ಮೂರು ಕೊಳವೇ ಬಾವಿಗಳಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ನೀರಿನಿಂದಾಗಿ ಸಮರ್ಪಕವಾಗಿ ನೀರು ಪೂರೈಕೆ ಸಾಧ್ಯವಿಲ್ಲದೆ ನೀರುಗಂಟಿಗಳು ಹೈರಾಣಾಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಇನ್ನಷ್ಟು ಬಿಗುಡಾಯಿಸುವ ಮುನ್ನಾ ಜನತೆಗೆ ನೀರಿನ ಕೊರತೆ ನೀಗಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.ಸಾರ್ವಜನಿಕರ ಹಿಡಿಶಾಪ: ಮುತ್ತಿಗಾರಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಕಳೆದೆರಡು ತಿಂಗಳಿಂದ ನೀರಿನ ತೀವ್ರವಾಗಿ ಬಾಧಿಸುತ್ತಿದೆ. ಕಾಲೋನಿಯ ನಿವಾಸಿಗಳು ನೀರಿಗಾಗಿ ಪರದಾಡುತ್ತಿರುವುದು ಸಾಮಾನ್ಯವಾಗಿ ಕಾಣಸಿಗುತ್ತಿದೆ. ಅಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದ್ದು, ನೂರಾರು ಕುಟುಂಬಗಳಿರುವ ಕಾಲೋನಿಗೆ ಸರಾಗವಾಗಿ ನೀರು ಪೂರೈಕೆ ಇಲ್ಲ ದಾಗಿದೆ. ಕಾಲೋನಿಯ ಒಂದೆರಡು ನಳಗಳಲ್ಲಿ ಬರುವ ನೀರಿಗೆ ಇಡೀ ಜನತೆ ತಾಮುಂದು ನಾಮುಂದು ಎಂದು ಮುಗಿ ಬೀಳುವುದು ಕಾಣಸಿಗುತ್ತಿದೆ. ನಿತ್ಯವೂ ನೀರಿನ ಗಲಾಟೆಗಳು ಇಲ್ಲಿ ಸಾಮಾನ್ಯವಾಗಿದೆ ಸಾರ್ವಜನಿಕರು ಪಂಚಾಯಿತಿಗೆ ಹಿಡಿಶಾಪ ಹಾಕುವಂತಾಗಿದೆ. ಮ್ಯಾಸರಹಟ್ಟಿ ಗ್ರಾಪಂ ಸದಸ್ಯರಾದ ಪಾಪಣ್ಣ, ಮ್ಯಾಸರಹಟ್ಟಿಯಲ್ಲಿ ಕಳೆದೊಂದು ವರ್ಷದಿಂದ ಕುಡಿಯುವ ನೀರಿನ ಕೊರತೆ ಇದೆ. ಸಮಸ್ಯೆ ಪರಿಹಾರಕ್ಕೆಂಬಂತೆ ಸಂಬಂಧಿಸಿದ ಅಧಿಕಾರಿಗಳು ಬೋರ್‌ವೆಲ್ ಕೊರೆಸಲು ಪಾಯಿಂಟ್ ಗುರುತಿಸಿ ತಿಂಗಳು ಕಳೆದರೂ ಇದುವರೆಗೂ ಬೋರ್‌ವೆಲ್ ಕೊರೆಸಿಲ್ಲ. ಕೂಡಲೇ ಹೊಸ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಬೇಕು ಎಂದರು.
ಬಿಜಿಕೆರೆ ಗ್ರಾಪಂ ಪಿಡಿಒ ಮಲ್ಲಿಕಾರ್ಜುನ ಮಾತನಾಡಿ, ಮ್ಯಾಸರಹಟ್ಟಿಯಲ್ಲಿನ ಕೊಳವೆ ಬಾವಿಗಳ ಪೈಕಿ ಕೆಟ್ಟದ್ದ ಎರಡನ್ನು ದುರಸ್ತಿಗೊಳಿಸಲಾಗಿದೆ. ನೀರು ಸಮರ್ಕವಾಗಿ ವಿತರಣೆಗೆ ಕ್ರಮ ವಹಿಸಲಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿರುವ ಸಮಸ್ಯೆ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೊಸ ಬೋರ್‌ವೆಲ್ ಕೊರೆಸಲು ಮನವಿ ಮಾಡಿದ್ದೇನೆ ಎಂದು ಹೇಳಿದರು.