ಆಂಧ್ರ ಜೋಳ ಕರ್ನಾಟಕದಲ್ಲಿ ಮಾರಾಟ ಮಾಡುವ ಜಾಲ ಪತ್ತೆ; ಪ್ರಕರಣ ದಾಖಲು

KannadaprabhaNewsNetwork |  
Published : Jun 24, 2026, 02:00 AM IST
ಜೋಳ  | Kannada Prabha

ಸಾರಾಂಶ

ಸಹಾಯಕ ಆಯುಕ್ತ ಎಚ್‌.ಡಿ. ರಾಜೇಶ್‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಬಳ್ಳಾರಿ: ಆಂಧ್ರ ಪ್ರದೇಶದಲ್ಲಿ ಬೆಳೆದ ಜೋಳವನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ತಾಲೂಕಿನ ಅಸುಂಡಿ ಗ್ರಾಮದ ಖರೀದಿ ಕೇಂದ್ರದಲ್ಲಿ ರಾಜ್ಯದ ರೈತರ ಹೆಸರಿನಲ್ಲಿ ಎಂಎಸ್‌ಪಿಯಲ್ಲಿ ಹೆಚ್ಚಿನ ದರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು, ಸಾರ್ವಜನಿಕರು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಎಚ್‌.ಡಿ. ರಾಜೇಶ್‌ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಆಂಧ್ರ ಪ್ರದೇಶದ ಪಾಸಿಂಗ್‌ ಹೊಂದಿರುವ ಒಂದು ಲಾರಿಯಲ್ಲಿ ತಲಾ 50 ಕೆಜಿ ತೂಕದ 480 ಚೀಲಗಳಲ್ಲಿದ್ದ ಸುಮಾರು 240 ಕ್ವಿಂಟಲ್‌, ಮತ್ತೊಂದು ಲಾರಿಯಲ್ಲಿ ತಲಾ 50 ಕೆಜಿ ತೂಕದ 410 ಚೀಲಗಳಲ್ಲಿದ್ದ 205 ಕ್ವಿಂಟಲ್‌ ಕಳಪೆ ಗುಣಮಟ್ಟದ ಬಿಳಿ ಜೋಳವನ್ನು ತುಂಬಿಕೊಂಡು ಅಸುಂಡಿ ಗ್ರಾಮದಲ್ಲಿನ ಖರೀದಿ ಕೇಂದ್ರದಲ್ಲಿ ಗ್ರಾಮದ ರೈತರ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿತ್ತು. ಈ ವೇಳೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಲಾರಿ ಚಾಲಕರನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಒಂದು ಲಾರಿಯಲ್ಲಿನ ಜೋಳವನ್ನು ಆಂಧ್ರ ಪ್ರದೇಶದ ಗೋಡೆಹಾಳ್‌ ಗ್ರಾಮದ ವೀರಾಂಜಿನಯ್ಯ, ಗುಂಟೂರು ಬಳಿಯ ಹತ್ತೋಡಿ ಗ್ರಾಮದಿಂದ ಸೂರ್ಯಪ್ರಕಾಶ್‌ ರೆಡ್ಡಿ ಎಂಬವರು, ಮತ್ತೊಂದು ಲಾರಿಯಲ್ಲಿದ್ದ ಜೋಳವನ್ನು ಬಳ್ಳಾರಿಯ ಲಕ್ಷ್ಮಿನಾರಾಯಣ ಎಂಬವರು ಕಡಿಮೆ ಬೆಲೆಗೆ ಖರೀದಿ ಮಾಡಿದ್ದ ಜೋಳವನ್ನು ಖರೀದಿ ಕೇಂದ್ರದ ಅಧಿಕಾರಿ, ಸಿಬ್ಬಂದಿಯೊಂದಿಗೆ ಶಾಮೀಲಾಗಿ ಅಸುಂಡಿ ಗ್ರಾಮದ ರೈತರ ಹೆಸರಿನಲ್ಲಿ ಅಕ್ರಮವಾಗಿ ಮಾರಾಟ ಮಾಡುವ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ₹16.46 ಲಕ್ಷ ಮೌಲ್ಯದ 445 ಕ್ವಿಂಟಲ್‌ ಜೋಳವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಹಾರ ಇಲಾಖೆಯ ಆಹಾರ ಶಿರಸ್ತೇದಾರ ಶರಣಬಸಯ್ಯ ಅವರು ಪಿ.ಡಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಆಂಧ್ರಪ್ರದೇಶದ ಗುಂಟೂರಿನ ಹತ್ತೋಡಿ ಗ್ರಾಮದ ವೀರಾಂಜಿನಯ್ಯ, ಬಳ್ಳಾರಿ ತಾಲೂಕಿನ ಗೋಡೆಹಾಳ್‌ ಗ್ರಾಮದ ಸೂರ್ಯಪ್ರಕಾಶ್‌, ಲಾರಿ ಚಾಲಕರಾದ ಶ್ರೀರಾಮುಲು, ರಾಮಂಜಿನಿ, ಬಳ್ಳಾರಿಯ ಲಕ್ಷ್ಮಿನಾರಾಯಣ, ಅಸುಂಡಿ ಗ್ರಾಮದ ಖರೀದಿ ಕೇಂದ್ರದ ಅಧಿಕಾರಿ ಸೋಮಶೇಖರ್‌, ಗ್ರೇಡರ್‌ ಭೀಮಶಂಕರ್‌ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳವನ್ನು ರೈತರಿಂದ ಪ್ರತಿ ಕ್ವಿಂಟಲ್‌ಗೆ ₹3699 ನಂತೆ ಖರೀದಿ ಕೇಂದ್ರದಲ್ಲಿ ಖರೀದಿಸಲಾಗುತ್ತಿದೆ. ಆಂಧ್ರದಲ್ಲಿ ಕಡಿಮೆ ದರದಲ್ಲಿ ಖರೀದಿಸಿದ್ದ ಬಿಳಿ ಜೋಳವನ್ನು ಕರ್ನಾಟಕ ರಾಜ್ಯದಲ್ಲಿ ಎಂಎಸ್‌ಪಿ ದರದಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಸಾಯನಿಕ ಗೊಬ್ಬರ ತಗ್ಗಿಸಿ, ಸಾವಯವ ಕೃಷಿಗೆ ಆದ್ಯತೆ ನೀಡಿ
ಸ್ವರ್ಣವಲ್ಲೀ ಶ್ರೀಗಳ 59ನೇ ವರ್ಧಂತಿ ಉತ್ಸವ