ಬಳ್ಳಾರಿ: ಪ್ರಸ್ತುತ ದಿನಗಳಲ್ಲಿ ಮಣ್ಣಿನ ಆರೋಗ್ಯ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ರೈತರು ಅತಿಯಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಮಾಡುವುದನ್ನು ತಗ್ಗಿಸಬೇಕು. ಭೂಮಿಯ ಫಲವತ್ತತೆ ಹೆಚ್ಚಿಸಲು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಕರೆ ನೀಡಿದರು.
ಕೆವಿಕೆ ಹಗರಿಯ ಕೃಷಿ ವಿಜ್ಞಾನಿ ಡಾ.ರವಿ ಮಾತನಾಡಿ, ಸಸ್ಯಗಳ ಸಮೃದ್ಧ ಬೆಳವಣಿಗೆಗೆ 16 ಅತ್ಯಗತ್ಯ ಪೋಷಕಾಂಶಗಳ ಅವಶ್ಯಕತೆ ಇದೆ. ಇವುಗಳಲ್ಲಿ ಕೆಲವು ಮಣ್ಣಿನಲ್ಲಿ ಲಭ್ಯವಿದ್ದರೆ ಇನ್ನು ಕೆಲವು ಪೋಷಕಾಂಶಗಳು ವಾತಾವರಣದಿಂದ ದೊರೆಯುತ್ತವೆ. ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ಅದರಿಂದ ಬರುವ ಫಲಿತಾಂಶದ ಆಧಾರದಲ್ಲಿ ರಸಗೊಬ್ಬರಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ವೈಜ್ಞಾನಿಕ ಮಾಹಿತಿ ನೀಡಿದರು.
ಇನ್ನೋರ್ವ ವಿಜ್ಞಾನಿ ಡಾ.ನವೀನ್ ಮಾತನಾಡಿ, ಮನೆಯಲ್ಲೇ ತಯಾರಿಸಬಹುದಾದ ಪಂಚಗವ್ಯ, ಜೀವಾಮೃತ, ಬೀಜಾಮೃತದಂತಹ ಸಾವಯವ ಕೃಷಿ ಪರಿಕರಗಳನ್ನು ಬಳಸುವುದರಿಂದ ಕೃಷಿ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು. ನಮ್ಮ ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರವನ್ನು ನೀಡಲು ಸಾಧ್ಯವಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕೃಷಿ ಅಧಿಕಾರಿ ಬಸವರಾಜ್ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳು ಹಾಗೂ ಸಹಾಯಧನಗಳ ಬಗ್ಗೆ ರೈತರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ದಮ್ಮೂರು ಮತ್ತು ಕೋಳೂರು ಗ್ರಾಮದ ನೂರಾರು ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೃಷಿ ತಜ್ಞರಿಂದ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದುಕೊಂಡರು.