ಕುಡಿಯುವ ನೀರಿಗಾಗಿ ಕಾಯ್ದಿರಿಸಿದ ಆಂಧ್ರ: ಕರ್ನಾಟಕದಲ್ಲಿ ಬಳಕೆಗೆ ಕಸರತ್ತು

KannadaprabhaNewsNetwork |  
Published : Nov 08, 2026, 02:30 AM IST
ತುಂಗಭದ್ರಾ ಜಲಾಶಯ | Kannada Prabha

ಸಾರಾಂಶ

ಎಲ್‌ನಿನೊ ಪರಿಣಾಮದಿಂದ ಮುಂದಿನ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವರ್ಷಕ್ಕಿಂತಲೂ ಅಧಿಕ ಪ್ರಮಾಣದ ನೀರು ಕಾಯ್ದಿರಿಸುವ ಅಗತ್ಯ ಎದುರಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಎಲ್‌ನಿನೊ ಪರಿಣಾಮದಿಂದ ಮುಂದಿನ ಬೇಸಿಗೆಯಲ್ಲಿ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಪ್ರತಿ ವರ್ಷಕ್ಕಿಂತಲೂ ಅಧಿಕ ಪ್ರಮಾಣದ ನೀರು ಕಾಯ್ದಿರಿಸುವ ಅಗತ್ಯ ಎದುರಾಗಿದೆ.

ಜಲಾಶಯದಲ್ಲಿ ಜಲಚರಗಳ ಸಂರಕ್ಷಣೆ ಹಾಗೂ ಕುಡಿಯುವ ನೀರಿಗಾಗಿ ಪ್ರತಿ ವರ್ಷ ಕಾಯ್ದಿರಿಸುವ 10.71 ಟಿಎಂಸಿ ನೀರು ಈ ಬಾರಿ ಸಾಲದಾಗುವ ಆತಂಕವಿದ್ದು, ಮುನ್ನೆಚ್ಚರಿಕೆ ವಹಿಸದಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೋರ್‌ವೆಲ್‌ಗಳು ಬತ್ತುತ್ತಿವೆ. ಭಾಗ್ಯನಗರ ಪಟ್ಟಣವೊಂದರಲ್ಲಿಯೇ 10 ಬೋರ್‌ವೆಲ್‌ಗಳು ವಿಫಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಬೇಸಿಗೆಯಲ್ಲಿ ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯ ಪೂರೈಸಲು ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹಿಸಿಟ್ಟುಕೊಳ್ಳಬೇಕಿದೆ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಎಚ್ಚೆತ್ತುಕೊಂಡ ಆಂಧ್ರ–ತೆಲಂಗಾಣ: ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಪ್ರಸಕ್ತ ವರ್ಷ ತುಂಗಭದ್ರಾ ಜಲಾಶಯದ ನೀರನ್ನು ಕೃಷಿಗೆ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡು, ಕುಡಿಯುವ ನೀರಿಗಾಗಿ ಕಾಯ್ದಿರಿಸಿವೆ. ಎರಡೂ ರಾಜ್ಯಗಳು ತಮ್ಮ ಪಾಲಿನ ಒಟ್ಟು 14 ಟಿಎಂಸಿ ನೀರನ್ನು ಕಾಯ್ದಿರಿಸಿಕೊಂಡಿವೆ. ಆದರೆ, ಕರ್ನಾಟಕ ಸರ್ಕಾರ ತನ್ನ ಪಾಲಿನ ಬಹುತೇಕ ನೀರನ್ನು ಈಗಾಗಲೇ ಬಳಕೆ ಮಾಡಿಕೊಂಡಿದೆ. ತುಂಗಭದ್ರಾ ಜಲಾಶಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ 70.807 ಟಿಎಂಸಿ ನೀರಿನಲ್ಲಿ 10.71 ಟಿಎಂಸಿಯನ್ನು ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಉಳಿದ 60.097 ಟಿಎಂಸಿ ನೀರಿನಲ್ಲಿ ಈಗಾಗಲೇ 51.243 ಟಿಎಂಸಿ ಬಳಕೆಯಾಗಿದೆ. ನ. 11ರ ವರೆಗೆ ಇನ್ನೂ 8.170 ಟಿಎಂಸಿ ನೀರು ಬಳಕೆಯಾಗುವ ನಿರೀಕ್ಷೆಯಿದೆ.

ಬೆಳೆ ಉಳಿಸಲು 4 ಟಿಎಂಸಿ ಅಗತ್ಯ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ಕರ್ನಾಟಕದ ಪಾಲಿನ ನೀರಿನ ಜತೆಗೆ ಹೆಚ್ಚುವರಿಯಾಗಿ ನಾಲ್ಕು ಟಿಎಂಸಿ ನೀರಿನ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶ ಕಾಯ್ದಿರಿಸಿರುವ ನೀರಿನಲ್ಲಿ ನಾಲ್ಕು ಟಿಎಂಸಿ ನೀರನ್ನು ಕರ್ನಾಟಕದ ರೈತರ ಬೆಳೆ ಉಳಿಸಿಕೊಳ್ಳಲು ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಕೋರಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಬೇಸಿಗೆ ಮುನ್ನವೇ ಮುನ್ನೆಚ್ಚರಿಕೆ ಅಗತ್ಯ: ಒಂದೆಡೆ ಈಗಿರುವ ಬೆಳೆಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದ್ದರೆ, ಮತ್ತೊಂದೆಡೆ ಎಲ್‌ನಿನೊ ಪರಿಣಾಮದಿಂದ ಮುಂದಿನ ಬೇಸಿಗೆಯಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆಯನ್ನು ಎದುರಿಸಲು ರಾಜ್ಯ ಸರ್ಕಾರ ಈಗಲೇ ಮುನ್ನೆಚ್ಚರಿಕೆ ವಹಿಸಬೇಕಿದೆ.

ಬೇಸಿಗೆಯಲ್ಲಿ ತಾಪಮಾನ ಹೆಚ್ಚಳದಿಂದ ನೀರಿನ ಆವಿಯಾಗುವ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ, ಮುಂಗಾರು ಮಳೆ ವಿಳಂಬವಾದರೆ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಬಹುದು. ಹೀಗಾಗಿ, ಜಲಾಶಯದಲ್ಲಿ ಕುಡಿಯುವ ನೀರಿಗಾಗಿ ಕಾಯ್ದಿರಿಸುವ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ ಎಂದು ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮನವಿ ಮಾಡಿದ್ದೇವೆ: ಆಂಧ್ರಪ್ರದೇಶದವರು ಈ ವರ್ಷ ಕಡಿಮೆ ಪ್ರಮಾಣದ ನೀರನ್ನು ಬಳಕೆ ಮಾಡಿಕೊಂಡು ಬೇಸಿಗೆಗಾಗಿ ಕಾಯ್ದಿರಿಸಿದ್ದಾರೆ. ಅವರ ಪಾಲಿನ ನೀರಿನಲ್ಲಿ ನಾಲ್ಕು ಟಿಎಂಸಿ ನೀರನ್ನು ನಮ್ಮ ರೈತರ ಬೆಳೆ ಉಳಿಸಿಕೊಳ್ಳಲು ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ