ಸಿದ್ದಾಪುರ: ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ, ಮಕ್ಕಳ ಹಾಗೂ ಮತ್ತಿತರ ವೈದ್ಯಾಧಿಕಾರಿಗಳಿಲ್ಲದೇ ತಾಲೂಕಿನ ಜನತೆ ಬೇರೆ ತಾಲೂಕಿನ ಸರ್ಕಾರಿ ಅಸ್ಪತ್ರೆಗೆ ಹೋಗಬೇಕು ಅಥವಾ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿರುವುದರಿಂದ ಕೂಡಲೇ ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರಲಾಗುವುದು ಎಂದು ತಾಪಂ ಆಡಳಿತಾಧಿಕಾರಿ ಡಿ.ಆರ್. ನಾಯ್ಕ ಹೇಳಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸುಮಾ ಎಸ್. ಮಾತನಾಡಿ, ತಾಲೂಕಿನಲ್ಲಿ ಶೇ. 3ರಷ್ಟು ಮಾತ್ರ ಮಳೆ ಪ್ರಮಾಣ ಕಡಿಮೆ ಇದೆ. ವಾಡಿಕೆ ಮಳೆ 3071 ಮಿಮೀ ಬೀಳಬೇಕಾಗಿತ್ತು. ಆದರೆ 3006 ಮಿಮೀ ಮಳೆ ಬಿದ್ದಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಶೇ. 65ರಷ್ಟು ಮಳೆ ಕಡಿಮೆ ಬಿದ್ದಿರುವುದರಿಂದ ಭತ್ತದ ಬೆಳೆ ಕುಂಠಿತವಾಗಿದೆ. ಈಗಾಗಲೇ ಈ ಕುರಿತು ಸರ್ವೇ ಕಾರ್ಯ ನಡೆಸಲಾಗುತ್ತಿದೆ. 10 ಗ್ರಾಪಂ ವ್ಯಾಪ್ತಿಯಲ್ಲಿ ಭತ್ತದ ಫಸಲು ಸಂಪೂರ್ಣ ಹಾನಿ ಅಗಿದೆ. ಈ ಕುರಿತು ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಎಚ್. ಮಾತನಾಡಿ, ಎಲೆಚುಕ್ಕಿ ರೋಗ ತಾಲೂಕಿನಲ್ಲಿ ಸುಮಾರು 2650 ಹೆಕ್ಟೇರಿನಲ್ಲಿ ಅಡಕೆ ಕೊಳೆರೋಗ ಇದೆ. ಎಲೆಚುಕ್ಕಿ ರೋಗದ ನಿಯಂತ್ರಣ ಅಗುತ್ತಿದೆ. ಕಳೆದ ಎರಡು ವರ್ಷ ಇದ್ದಷ್ಟು ಈಗಿಲ್ಲ. ಈ ಕುರಿತು ಅಡಕೆ ಬೆಳೆಗಾರರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕ ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಸುಮಾರು 250 ಆಕಳು ಕರುಗಳಿಗೆ ಚರ್ಮ ಗಂಟುರೋಗ ಕಾಣಿಸಿಕೊಂಡಿದೆ. ಲಸಿಕೆ ಹಾಕಲಾಗುತ್ತಿದೆ. ನ. 15ರಿಂದ ಕಾಲು- ಬಾಯಿ ಲಸಿಕೆ ಹಾಗೂ ಚರ್ಮಗಂಟು ರೋಗದ ನಿವಾರಣೆಗಾಗಿ ಲಸಿಕೆ ನೀಡಲಾಗುತ್ತಿದೆ. ಸಹಜವಾಗಿ ಮೃತಪಟ್ಟ 326 ಆಕಳುಗಳಿಗೆ ರಾಜ್ಯ ಸರ್ಕಾರ ₹34 ಲಕ್ಷ ಪರಿಹಾರ ನೀಡಿದೆ ಎಂದರು.