ಜನರಿಲ್ಲದೇ ನಡೆದ ಪ್ರಜಾಸೇವಾ ಕಾರ್ಯಕ್ರಮ!

KannadaprabhaNewsNetwork |  
Published : Nov 08, 2026, 02:30 AM IST
ಸಸಸಸ | Kannada Prabha

ಸಾರಾಂಶ

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ವೇದಿಕೆಯಾಗಿರುವ ಪ್ರಜಾಸೇವಾ ಅಂದೋಲನವು ಜನರಿಗಾಗಿ ರೂಪಿಸಿದ ಕಾರ್ಯಕ್ರಮ ಆಗಿದೆ.

ಸಿ.ಕೆ. ನಾಗರಾಜ ಹೊಸಪೇಟೆ

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಪ್ರಜಾಸೇವಾ ಅಭಿಯಾನದಲ್ಲಿ ಅರ್ಜಿದಾರರೇ ಇಲ್ಲದೇ ಕುರ್ಚಿಗಳು ಖಾಲಿ ಖಾಲಿ ಇದ್ದವು.

ಅಧಿಕಾರಿಗಳು ಬಿಟ್ಟರೆ ಅರ್ಜಿದಾರರೇ ಇಲ್ಲದಿರುವುದು ಪ್ರಜಾಸೇವಾ ಅಂದೋಲನ ಕಾರ್ಯಕ್ರಮವು ಜನರಿಂದ ದೂರವಾಗುತ್ತಿದೆಯಾ? ಎನ್ನುವ ಅನುಮಾನ ಮೂಡುತ್ತಿದೆ.

ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ವೇದಿಕೆಯಾಗಿರುವ ಪ್ರಜಾಸೇವಾ ಅಂದೋಲನವು ಜನರಿಗಾಗಿ ರೂಪಿಸಿದ ಕಾರ್ಯಕ್ರಮ ಆಗಿದೆ. ಈ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಜನರೇ ಇಲ್ಲದೇ ಕಾರ್ಯಕ್ರಮ ನಡೆದಿರುವುದು ಆಶ್ಚರ್ಯ ಎನ್ನಿಸಿದೆ.

ಜನರ ಮನೆಯ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಎನ್ನುವ ಘೋಷಾವಾಕ್ಯದ ರಾಜ್ಯ ಮಟ್ಟದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಕೂಡ್ಲಿಗಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿ ಎರಡು ತಿಂಗಳು ಕಳೆಯಿತು. ಅಷ್ಟರಲ್ಲೇ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮವು ಜನರಿಂದ ದೂರವಾಗುತ್ತಿದೆಯೋ ಅಥ‍ವಾ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಲೋ ಸಾರ್ವಜನಿಕರಲ್ಲಿ ಆಸಕ್ತಿ ಕೊರತೆ ಎದ್ದು ಕಾಣುತ್ತಿದೆ.

ಸಾರ್ವಜನಿಕರ ಸಮಸ್ಯೆ ಆಲಿಸಿ, ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಪ್ರಜಾಸೇವಾ ಕಾರ್ಯಕ್ರಮಕ್ಕೆ ಜನರೇ ಬಾರದಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಉಪಸ್ಥಿತಿಯೇ ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳ ಉದ್ದೇಶವಾದರೂ ಏನು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ತಮ್ಮ ಅಹವಾಲು ಸಲ್ಲಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದಿರುವುದು ಪ್ರಜಾಸೇವಾ ಕಾರ್ಯಕ್ರಮದಲ್ಲಿ ಜನರು ನಿರೀಕ್ಷಿಸಿದಷ್ಟು ಸ್ಪಂದನೆ ದೊರೆಯದಿರುವುದರಿಂದ ಸಾರ್ವಜನಿಕರು ನಿರಾಸಕ್ತಿ ತೋರಿದಂತೆ ಕಾಣುತ್ತಿದೆ.

ಪ್ರಜಾಸೇವಾ ಅಂದೋಲನ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯೋ ಅಥವಾ ವ್ಯಾಪಕ ಪ್ರಚಾರದ ಕೊರತೆಯೋ ಅಥವಾ ಸಭೆಯಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸದೇ ಇರುವುದರಿಂದ ಇದೊಂದು ಸರ್ಕಾರಿ ಕಾರ್ಯಕ್ರಮ, ಕೇವಲ ಅಧಿಕಾರಿಗಳ ಹಾಜರಾತಿ, ಅಧಿಕಾರಿಗಳ ಭಾಷಣಕ್ಕಷ್ಟೇ ಸೀಮಿತವಾಗಿತ್ತು. ಅಧಿಕಾರಿಗಳು ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ವ್ಯಾಪಕ ಪ್ರಚಾರ ಕೈಗೊಂಡು ಜನರ ಸಮಸ್ಯೆ ಗುರುತಿಸಿ ತಕ್ಷಣವೇ ಅವರ ಸಮಸ್ಯೆ ಈಡೇರಿಸಿದರೆ ಪ್ರಜಾಸೇವಾ ಕಾರ್ಯಕ್ರಮದ ಬಗ್ಗೆ ಭರವಸೆ ಮೂಡಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಸಾಧ್ಯವಾಗಲಿದೆ.

ಜನರಿಗಾಗಿ ಪ್ರಜಾಸೇವಾ ಕಾರ್ಯಕ್ರಮ, ಆದರೆ ಜನರೇ ಇಲ್ಲದಿದ್ದರೆ ಪ್ರಜಾಸೇವೆಯ ಆಶಯ ಈಡೇರುವುದಾದರೂ ಹೇಗೆ? ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಆಡಳಿತವೇ ಜನರ ಬಳಿಗೆ ತೆರಳಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಪ್ರಜಾಸೇವಾ ಕಾರ್ಯಕ್ರಮದ ಆಶಯ ಹೊಂದಿದ್ದರು. ಆದರೆ ಜನರಿಗೆ ಪ್ರಜಾಸೇವಾ ಕಾರ್ಯಕ್ರಮದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದಾದರೆ ಆಸಕ್ತಿಯಿಂದ ತೆರಳುತ್ತಾರೆ. ಪರಿಹಾರ ಸಿಗುವುದಿಲ್ಲ, ಕೇವಲ ತೋರ್ಪಡಿಕೆಗಾಗಿ ಪ್ರಜಾಸೇವಾ ಕಾರ್ಯಕ್ರಮ ಎನ್ನುವುದಾದರೆ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವುದಿಲ್ಲ ಎಂದು ಹೊಸಪೇಟೆಪ್ರಗತಿಪರ ಹೋರಾಟಗಾರ ಮರಡಿ ಜಂಬಯ್ಯ ನಾಯಕ ತಿಳಿಸಿದ್ದಾರೆ.

ದೀಪಾವಳಿ ಇರುವುದರಿಂದ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಬಸವಂತಪ್ಪ ಜಿಲ್ಲೆಗೆ ಮೂರು ದಿನಗಳ ಹಿಂದೆ ಭೇಟಿ ನೀಡಿದಾಗ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೊಸಪೇಟೆ ನಗರಕ್ಕೆ ಆಗಮಿಸಿದಾಗ ಅನೇಕ ಜನರು ತಮ್ಮ ಸಮಸ್ಯೆಗಳ ಮನವಿ ಸಲ್ಲಿಸಿದ್ದರು. ಹೀಗಾಗಿ ಶನಿವಾರ ನಡೆದ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಕಡಿಮೆ ಜನರು ಬಂದು ಅರ್ಜಿ ಸಲ್ಲಿಸಿದ್ದಾರೆ ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ