ಬೆಂಗಳೂರು ದಕ್ಷಿಣ / ಆನೇಕಲ್ : ಮನೆಗೆ ನುಗ್ಗಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದನ್ನು ಮನೆ ಮಾಲೀಕರು ಸಮಯಪ್ರಜ್ಞೆ ಮೆರೆದು ಕೂಡಿಹಾಕಿದ ಘಟನೆ ಬೆಂಗಳೂರು ದಕ್ಷಿಣ ಕ್ಷೇತ್ರದ ಜಿಗಣಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಗಣಿ ನಿವಾಸಿ ವೆಂಕಟೇಶ್ ಎನ್ನುವವರೇ ಚಿರತೆ ಕೂಡಿಹಾಕಿದವರು. ಕುಂಟರೆಡ್ಡಿ ಲೇಔಟ್‌ನ ಮಂಜುನಾಥ್ ಎನ್ನುವವರಿಗೆ ಸೇರಿದ ಕಟ್ಟಡದಲ್ಲಿ ವೆಂಕಟೇಶ್ ದಂಪತಿ ಬಾಡಿಗೆಗೆ ಇದ್ದು, ಗುರುವಾರ ಬೆಳಗ್ಗೆ 7.30ರ ಸಮಯದಲ್ಲಿ ದಂಪತಿ ಚಹಾ ಸೇವನೆ ಮಾಡುತ್ತಾ ಕುಳಿತಿದ್ದರು. ಈ ವೇಳೆ ಚಿರತೆಯೊಂದು ಮನೆಯೊಳಗೆ ಪ್ರವೇಶ ಮಾಡಿ ಕೊಠಡಿಗೆ ತೆರಳಿದೆ. ಇದನ್ನು ಗಮನಿಸಿದ ವೆಂಕಟೇಶ್ ಅವರು ಧೈರ್ಯಗೆಡದೆ ಕೊಠಡಿ ಬಾಗಿಲು ಚಿಲಕ ಹಾಕಿ ಸಮಯಪ್ರಜ್ಞೆ ಮೆರೆದಿದ್ದಾರೆ. ನಂತರ ಸ್ಥಳೀಯರಿಗೆ, ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.
ಬ್ಯಾರಿಕೇಡ್ ಅಳವಡಿಸಿ ಜನರ ನಿಯಂತ್ರಣ:
ಮನೆಯೊಳಗೆ ಚಿರತೆ ಸೇರಿಕೊಂಡಿರುವ ಸುದ್ದಿ ಸುತ್ತಮುತ್ತಲ ಗ್ರಾಮಗಳಿಗೆ ಹರಡುತ್ತಿದ್ದಂತೆ ಅಧಿಕ ಸಂಖ್ಯೆಯ ಜನರು ಮನೆಯ ಬಳಿ ಜಮಾಯಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೋಲಿಸರು ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರನ್ನು ದೂರ ಕಳುಹಿಸಿ ಮುಂಜಾಗ್ರತಾ ಕ್ರಮ ವಹಿಸಿದರು. ಮಳೆ ಸುರಿಯುತ್ತಿದ್ದರೂ ಜನರು ಕುತೂಹಲದಿಂದ ಚಿರತೆ ಕಾರ್ಯಾಚರಣೆ ನೋಡುತ್ತಿದ್ದರು.
ಎರಡು ಬಾರಿ ಅರಿವಳಿಕೆ ಚುಚ್ಚುಮದ್ದು: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶು ವೈದ್ಯಾಧಿಕಾರಿಗಳಾದ ಕಿರಣ್ ಮತ್ತು ಆನಂದ್ ಅವರು ಆಗಮಿಸಿ ಒಂದು ಅರಿವಳಿಕೆ ಚುಚ್ಚುಮದ್ದು ನೀಡಿದ್ದು, ಚಿರತೆ ಪ್ರಜ್ಞೆ ತಪ್ಪಿರಲಿಲ್ಲ. ಬಳಿಕ ಮತ್ತೊಂದು ಮತ್ತೊಂದು ಅರಿವಳಿಕೆ ಚುಚ್ಚುಮದ್ದು ನೀಡಿ ಸುರಕ್ಷಿತವಾಗಿ ಸೆರೆಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಾಗಿಸಿದರು. ಚಿರತೆಯ ಆರೋಗ್ಯ ಪರೀಕ್ಷಿಸಿದ ನಂತರ ಅದನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಧೈರ್ಯಮಾಡಿ ಸಮಯಪ್ರಜ್ಞೆ ಮೆರೆದು ಆಗಬಹುದಾದ ಅನಾಹುತ ತಪ್ಪಿಸಿದ ಬಾಡಿಗೆದಾರ ವೆಂಕಟೇಶ್ ಅವರನ್ನು ಊರಹಬ್ಬದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಗಣಿ ಪುರಸಭೆ ಸದಸ್ಯ ಪುನೀತ್ ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಎಸಿಎಫ್ ಗಣೇಶ್, ಆರ್‌ಎಫ್‌ಒ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ, ಜಿಗಣಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಮಂಜುನಾಥ್, ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.
ಏಕಾಏಕಿ ಮನೆಯೊಳಗೆ ನುಗ್ಗಿದ ಚಿರತೆ ಕಂಡು ದಿಗ್ಭ್ರಮೆಯಾಯಿತು. ನಮ್ಮನ್ನು ನೋಡಿಕೊಂಡು ಕೊಠಡಿಯೊಳಗೆ ಹೋದ ಮರುಗಳಿಗೆಯಲ್ಲಿ ಹೆದರದೆ ಕೊಠಡಿ ಬಾಗಿಲು ಮುಚ್ಚಿ ಚಿಲಕ ಹಾಕಿದೆವು. ಹೊರಗಡೆ ಬಂದು ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆಯನ್ನು ರಕ್ಷಿಸಲಾಗಿದೆ.
- ವೆಂಕಟೇಶ್, ಚಿರತೆ ಕೂಡಿಹಾಕಿದ ವ್ಯಕ್ತಿ