ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ಕ್ಷೇತ್ರದ ಶಸ್ತ್ರಚಿಕಿತ್ಸೆಯಲ್ಲಿ ಅರವಳಿಕೆ ತಜ್ಞರ ಪಾತ್ರ ಮುಖ್ಯವಾಗಿದ್ದು, ಅವರು ವಿಷಯ ಪರಿಣತಿಯ ಜೊತೆಗೆ ಉತ್ತಮ ಆಡಳಿತಗಾರರಾಗಿಯೂ ಕಾರ್ಯ ನಿರ್ವಹಿಸಬೇಕಿದೆ ಎಂದು ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಮಾಜಿ ಅಧ್ಯಕ್ಷ ಮತ್ತು ವಿಶ್ರಾಂತ ಕುಲಪತಿ ಡಾ.ಪಿ.ಎಫ್. ಕೊಟೂರ ಹೇಳಿದರು.ನಗರದ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅರವಳಿಕೆ ಶಾಸ್ತ್ರ ವಿಭಾಗ ಮತ್ತು ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಕರ್ನಾಟಕ ರಾಜ್ಯ ಶಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ಪರೀಕ್ಷೆ ಸಂಬಂಧಿತ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಸಂದರ್ಭ ವೈದ್ಯಕೀಯ ಪ್ರಕರಣಗಳನ್ನು ವ್ಯವಸ್ಥಿತವಾಗಿ ಪ್ರಸ್ತುತ ಪಡಿಸಲು ಈ ತರಬೇತಿ ಕಾರ್ಯಾಗಾರದಿಂದ ಉಪಯೋಗವಾಗುತ್ತದೆ. ಇದು ಶಿಕ್ಷಕರಿಗೂ ಕಲಿಕಾ ತರಬೇತಿ ಆಗಲಿದೆ. ಅರವಳಿಕೆ ಶಾಸ್ತ್ರದ ವಿದ್ಯಾರ್ಥಿಗಳು ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಗುಣಮಟ್ಟದ ಮಾಹಿತಿ ಪಡೆಯಬಹುದಾಗಿದೆ. ಎಲ್ಲ ವೈದ್ಯರಿಗೆ ಅರವಳಿಕೆ ತಜ್ಞರ ಅವಶ್ಯಕತೆಯಿದ್ದು, ಶಸ್ತ್ರಚಿಕಿತ್ಸೆಗಳಲ್ಲಿ ಅರವಳಿಕೆ ತಜ್ಞರು ಉತ್ತಮ ಆಡಳಿತಗಾರರಾಗಿ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದರು.ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಆಶಯದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಇಂತಹ ಕಾರ್ಯಾಗಾರವನ್ನು ನಮ್ಮ ವೈದ್ಯಕೀಯ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದೆ. ಪರೀಕ್ಷೆ ಕುರಿತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಾಯವಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಅರವಳಿಕೆ ಶಾಸ್ತ್ರಜ್ಞರ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಶಿವಕುಮಾರ ಕುಂಬಾರ, ವೈದ್ಯಕೀಯ ಕ್ಷೇತ್ರದಲ್ಲಿ ಅರವಳಿಕೆ ತಜ್ಞರಪಾತ್ರ ತುಂಬ ಮಹತ್ವದ್ದಾಗಿದೆ. ಯುವ ಅರವಳಿಕೆ ತಜ್ಞರು ರೋಗಿಗಳ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಪ್ರಶಸ್ತಿ ಗೌರವಗಳಿಗೆ ಮನ್ನಣೆ ನೀಡದೆ ವೃತ್ತಿಗೆ ನ್ಯಾಯ ಒದಗಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವೇದಿಕೆಯಲ್ಲಿ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಐ.ಎಸ್.ಎ ಅಕಾಡೆಮಿ ಕೌನ್ಸಿಲ್ ಚೇರ್ಮನ್ ಡಾ.ಗುರುಲಿಂಗಪ್ಪಾ ಪಾಟೀಲ, ಐ.ಎಸ್.ಎ ಸೆಕ್ರೆಟರಿ ಡಾ.ಶಿವಕುಮಾರ, ಐ.ಎಸ್.ಎ ಪದಾಧಿಕಾರಿಗಳಾದ ಡಾ.ಶ್ರೀನಿವಾಸನ್, ಡಾ.ಸಂಧ್ಯಾ, ಡಾ.ಅನಿಲಕುಮಾರ, ಸಮ್ಮೇಳನದ ಅಧ್ಯಕ್ಷ ಡಾ.ಶಿವಾನಂದ ಹುಲಕುಂದ ಮತ್ತು ಕಾರ್ಯದರ್ಶಿ ಡಾ.ಛಾಯಾ ಜೋಶಿ ಉಪಸ್ಥಿತರಿದ್ದರು.
ಡಾ.ಸಾಯಿತೇಜಾ ಮತ್ತು ಡಾ.ಅನುಷಾ ಪ್ರಾರ್ಥಿಸಿದರು. ಡಾ.ಛಾಯಾ ಜೋಶಿ ಸ್ವಾಗತಿಸಿದರು. ಡಾ.ಶಿಲ್ಪಾ ಮಾಸೂರ ಪರಿಚಯಿಸಿದರು. ಡಾ.ಅರ್ಚನಾ ಎಂಡಿಗೇರಿ ವಂದಿಸಿದರು. ಡಾ.ಭಾಗ್ಯಶ್ರೀ ಮತ್ತು ಡಾ.ಐಶ್ವರ್ಯ ನಿರೂಪಿಸಿದರು.ಬಿವಿವಿ ಸಂಘದ ಗೌರವಾನ್ವಿತ ಸದಸ್ಯರು, ಗಣ್ಯರು, ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು, ವಿವಿಧ ಭಾಗಗಳಿಂದ ಆಗಮಿಸಿದ ವೈದ್ಯರು ಮತ್ತು ವಿದ್ಯಾರ್ಥಿಗಳು, ವೈದ್ಯಕೀಯ ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬೇರೆ ಬೇರೆ ರಾಜ್ಯಗಳಿಂದ ಸುಮಾರು 500ಕ್ಕೂ ಹೆಚ್ಚು ಅರವಳಿಕೆ ಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.