ಹಾವೇರಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ಗೌರವಧನ ಪಾವತಿಯಾಗಿಲ್ಲ. ಜತೆಗೆ, ಮೊಟ್ಟೆ ಬಿಲ್ ಕೂಡ ಬಿಡುಗಡೆಯಾಗಿಲ್ಲ. ಇದನ್ನು ಖಂಡಿಸಿ ಅ.೨೧ರಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ೧೯೯೧ ಅಂಗನವಾಡಿಗಳಿದ್ದು, ೧೯೮೮ ಕಾರ್ಯಕರ್ತೆಯರು ಹಾಗೂ ೧೯೯೧ ಸಹಾಯಕಿಯರು ಅಲ್ಪ ಗೌರವಧನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ ಫಲಾನುಭವಿಗಳಾದ ೧೩,೬೭೬ ಗರ್ಭಿಣಿಯರು, ೧೨,೯೦೬ ಬಾಣಂತಿಯರು, ೩ ರಿಂದ ೬ವರ್ಷದೊಳಗಿನ ೫೯೮೩೮ ಮಕ್ಕಳು ಹೀಗೆ ೮೬,೪೨೦ ಫಲಾನುಭವಿಗಳು ಇದ್ದಾರೆ. ಈ ಪೈಕಿ ೨೬೫೮೨ ಮಹಿಳೆಯರಿಗೆ ಪ್ರತಿ ತಿಂಗಳು ೨೪ ಕೋಳಿ ಮೊಟ್ಟೆಗಳನ್ನು ವಿತರಿಸಬೇಕು. ಇನ್ನುಳಿದ ೫೯,೮೩೮ ಮಕ್ಕಳಿಗೆ ವಾರಕ್ಕೆ ೨ ದಿನ ಮೊಟ್ಟೆ ವಿತರಿಸಲಾಗುತ್ತದೆ. ಪ್ರತಿ ತಿಂಗಳು ಕನಿಷ್ಠ ೧೧ಲಕ್ಷ ಮೊಟ್ಟೆಗಳನ್ನು ಖರೀದಿಸಬೇಕು. ಇದರ ಬೆಲೆ ರು. ೬೦ ಲಕ್ಷಕ್ಕಿಂತಲೂ ಅಧಿಕವಾಗುತ್ತದೆ. ಸರ್ಕಾರ ಕೂಡ ಬಾಲವಿಕಾಸ ಸಮಿತಿಗೆ ಮೊಟ್ಟೆ, ಕ್ಷೀರಭಾಗ್ಯ, ತರಕಾರಿ, ಸಕ್ಕರೆ ಖರೀದಿಸಲು ಸಾಕಷ್ಟು ಹಣವನ್ನು ನೀಡುತ್ತದೆ. ಪ್ರಸ್ತುತ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಒಂದನೇ ಕಂತಿನ ಹಣವನ್ನು ನೀಡಿದ್ದು, ಎರಡನೇ ಕಂತಿನಲ್ಲಿ ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳು ಬಿಡುಗಡೆಯಾಗಬೇಕಿದ್ದ ಹಣವನ್ನು ಮಂಜೂರು ಮಾಡಿದೆ. ಆದರೆ ಅಧಿಕಾರಿಗಳು ಮಾತ್ರ ಬಾಲವಿಕಾಸ ಸಮಿತಿಗೆ ಸಂದಾಯ ಮಾಡಿಲ್ಲ ಎಂದು ಆರೋಪಿಸಿದರು.ಅಂಗನವಾಡಿ ಕಾರ್ಯಕರ್ತೆಯರು ಮೂರು ನಾಲ್ಕು ತಿಂಗಳಿನಿಂದ ಗೌರವಧನ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಬೇರೆ ಕಡೆಗೆ ಸಾಲ ಮಾಡಿ ಮಕ್ಕಳಿಗೆ ಮೊಟ್ಟೆಗಳನ್ನು ತಂದು ಕೊಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿದ್ದು, ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ಅ.೨೦ರೊಳಗಾಗಿ ಬಾಕಿ ಇರುವ ಮೊಟ್ಟೆ ಹಣ, ತರಕಾರಿ ಹಣವನ್ನು ಬಿಡುಗಡೆ ಮಾಡಬೇಕು. ಬಾಕಿ ಇರುವ ಗೌರವಧನ, ಗ್ಯಾಸ್ ಬಿಲ್, ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳ ಬಾಡಿಗೆ ಬಿಲ್‌ನ್ನು ಪಾವತಿಸಬೇಕು. ಇಲ್ಲದಿದ್ದರೇ ಅ.೨೧ರಿಂದ ಅಂಗನವಾಡಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾ ಸಂಚಾಲಕ ವಿನಾಯಕ ಕುರುಬರ, ಡಿ.ಡಿ ಪೂಜಾರ, ನೀಲಮ್ಮ ವಾಲಿ, ಕೆ.ಪಿ ಹಿರೇಮಠ ಇದ್ದರು.